ಉಡುಪಿ: ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಅಪಘಾತಗೊಂಡು ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊಸ್ಮಾರು ಬಳಿ ಸಂಭವಿಸಿದೆ.
ಈದು ಗ್ರಾಮದ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26) ಮೃತಪಟ್ಟ ಮಹಿಳೆ. ಇವರು ವಿಶಾಲ್ ಅವರನ್ನು ಮದುವೆಯಾಗಿ ಮೂರು ತಿಂಗಳಷ್ಟೇ ಕಳೆದಿತ್ತು. ಶುಕ್ರವಾರ ಸಂಜೆ ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಾಯಿ ರಸ್ತೆಗೆ ಅಡ್ಡ ಬಂದಿದ್ದು, ಇದರ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಇದರಿಂದ ನೀಕ್ಷಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.