ವಿಟ್ಲ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ ಬೇರಿಕೆ ಇದರ ನೂತನ ಪದಗ್ರಹಣ ಕಾರ್ಯಕ್ರಮ ಭಾನುವಾರ ಸಂಘದ ಸಮುದಾಯ ಭವನದ ಕಟ್ಟಡದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮುದಾಯ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ ಪದಗ್ರಹಣ ನಡೆಸಿ, ಪ್ರತಿಜ್ಞಾ ವಿಧಿ ಬೋಧಿಸಿದ ಬಳಿಕ ಮಾತನಾಡಿ,
ಹಿಂದುಳಿದವರೆಂಬ ಮನೋಸ್ಥಿತಿಯಿಂದ ಮುಕ್ತರಾಗಿ ಮುನ್ನಡೆಯಬೇಕಾದ ಅವಶ್ಯಕತೆಯಿದೆ. ಸಮಾಜ ಬಾಂಧವರು ಸ್ವಾಭಿಮಾನದ ಬದುಕು ನಡೆಸುವ ನಿಟ್ಟಿನಲ್ಲಿ ಜಾತಿ ಸಂಘಗಳ ಪಾತ್ರ ಮಹತ್ವದ್ದಾಗಿದೆ. ನಾವು ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯೊಂದಿಗೆ ಬದಲಾಗುತ್ತಾ ಸಾಗಬೇಕು. ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ಸಿಕ್ಕಿದಾಗ ಸಮಾಜದ ಮುಖ್ಯವಾಹಿನಿಯೊಂದಿಗೆ ಗೌರವಯುತವಾಗಿ ಬದುಕಲು ಸಾಧ್ಯ ಎಂದರು.
ಸಂಘದ ಮೂಲಕ ಹತ್ತಾರು ಕಾರ್ಯಗಳು ನಡೆದಿವೆ. ಸರ್ಕಾರದ ಅನುದಾನದೊಂದಿಗೆ ಹಿಂದಿನ ಸಂಘದ ಪದಾಧಿಕಾರಿಗಳ ಮುತುವರ್ಜಿಯಿಂದ ಸಮುದಾಯ ಭವನ, ಗುರು ಮಂದಿರ ಸುಂದರವಾಗಿ ನಿರ್ಮಾಣಗೊಂಡಿದೆ. ಮನೆ ಪರಿಸರದಲ್ಲಿ ಮೂಲ ಸಂಸ್ಕಾರದ ಪಾಠ ಸಿಗಬೇಕು. ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆತ್ತವರು ಸದಾ ಬೆಂಬಲವಾಗಿ ಬೇಕು ಎಂದು ನೋಟರಿ ವಕೀಲ ಪದ್ಮನಾಭ ಪೂಜಾರಿ ಸಣ್ಣಗುತ್ತು ತಿಳಿಸಿದರು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಮೈರುಂಡ, ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಪ್ಪ ಪೂಜಾರಿ, ಪತ್ರಕರ್ತ ವಿಷ್ಣುಗುಪ್ತ ಪುಣಚ, ಸಂಘದ ಕಾರ್ಯದರ್ಶಿ ಮೋಹನ್ ಗುರ್ಜಿನಡ್ಕ, ಗೌರವ ಸಲಹೆಗಾರ ನಾರಾಯಣ ಪೂಜಾರಿ ಕಟ್ನಾಜೆ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿ ಪುಷ್ಪ ಬದಿಗುಡ್ಡೆ ಉಪಸ್ಥಿತರಿದ್ದರು.
ಆಶಿಕಾ, ಚೈತನ್ಯ, ವೀಕ್ಷಣ್ಯ ಪ್ರಾರ್ಥಿಸಿದರು. ಯಶು ಕಟ್ನಾಜೆ ಸ್ವಾಗತಿಸಿದರು. ನಳಿನಿ ರಾಜೇಶ್ ಹಲಸಿನ ಕಟ್ಟೆ ವಂದಿಸಿದರು. ಹರೀಶ್ ನೀರಕೋಡಿ ಕಾರ್ಯಕ್ರಮ ನಿರೂಪಿಸಿದರು.