ಯಾಂತ್ರಿಕ ಮೀನುಗಾರಿಕೆಗೆ ನಿಷೇಧ; ಹೊಳೆ ಮೀನಿಗೆ ಭಾರೀ ಡಿಮ್ಯಾಂಡ್
ಉಡುಪಿ: ಮಳೆಗಾಲ ಬಂತೆಂದರೆ ಸಾಕು, ಗಾಳ ಹಾಕಿ ಮೀನು ಹಿಡಿಯುವ ಬೇಟೆ ಶುರುವಾಗುತ್ತೆ. ಹೊಳೆ, ನದಿಗಳ ದಂಡೆ, ಸೇತುವೆಯ ಮೇಲೆ ನಿಂತು ಗಾಳ ಹಾಕಿ ಮೀನು ಹಿಡಿಯುವ ಸಂಭ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ಇದನ್ನು ಕೆಲವು ಹವ್ಯಾಸಕ್ಕಾಗಿ ಮಾಡಿದರೆ, ಇನ್ನೂ ಕೆಲವು ಜೀವನೋಪಾಯಕ್ಕಾಗಿ ಮಾಡುತ್ತಾರೆ.
ಜೂನ್ ಹಾಗೂ ಜುಲೈ ಎರಡು ತಿಂಗಳ ಕಾಲ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿದ್ದು, ಸಮುದ್ರದ ತಾಜಾ ಮೀನುಗಳು ಸಿಗುವುದಿಲ್ಲ. ಈ ಸಲ ನಾಡದೋಣಿ ಮೀನುಗಾರಿಕೆಯೂ ವಿಳಂಬವಾಗಿದ್ದು, ಮಾರುಕಟ್ಟೆಯಲ್ಲಿ ಮೀನಿಗೆ ಬರ ಉಂಟಾಗಿದೆ. ಹೀಗಾಗಿ ಹೊಳೆ, ನದಿಗಳ ಮೀನುಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ.
ಸದ್ಯ ಮಾರುಕಟ್ಟೆಯಲ್ಲಿ ಮೀನಿನ ಕೊರತೆಯಿದೆ. ಹೊರ ರಾಜ್ಯಗಳಿಂದ ಮೀನುಗಳು ಬಂದರೂ ಅವು ಅಷ್ಟು ಪ್ರೆಶ್ ಆಗಿಲ್ಲ. ಅಲ್ಲದೆ, ದರ ಕೂಡ ದುಬಾರಿಯಾಗಿದೆ. ಆದ್ದರಿಂದ ಹೊಳೆ ಮೀನಿಗೆ ಭಾರೀ ಬೇಡಿಕೆ ಬಂದಿದೆ. ಹೊಳೆ ಮೀನಿನ ರುಚಿ ಅರಿತವರು ಈ ಮೀನು ಖರೀದಿಗೆ ಮುಗಿಬೀಳುತ್ತಾರೆ. ಅದರಲ್ಲೂ ಮರಿ ಮುಗುಡು, ಮುಗುಡು, ಮಡಂಜಿ, ಇರ್ಪೆ, ಮಟ್ಟೆ, ಚೀಂಕಡೆ ಮೀನುಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇದೆ.