ಚೆನ್ನೈ: ಅಕ್ರಮವಾಗಿ ಚಿನ್ನವನ್ನು ವಿದೇಶಕ್ಕೆ ಸಾಗಿಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿರುವ ಚೆನ್ನೈ ಮೂಲದ ಯೂಟ್ಯೂಬರ್ ಸಬೀರ್ ಅಲಿ ತನ್ನ ಮಲಿಗೆಯ ಸಿಬಂದಿಗೆ ಚಿನ್ನವನ್ನು ಗುದದ್ವಾರದಲ್ಲಿಟ್ಟು ಸಾಗಿಸಲು ತರಬೇತಿ ನೀಡಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಜತೆಗೆ 2 ತಿಂಗಳಲ್ಲಿ ಒಟ್ಟು 167 ಕೋಟಿ ರೂ. ಮೌಲ್ಯದ 267 ಕೆ.ಜಿ. ಚಿನ್ನವನ್ನು ಸಬೀರ್ ಅಲಿ ತಂಡ ಸಾಗಿಸಿದೆ.
ಕಳೆದ ಜುಲೈ 29 ಹಾಗೂ 30ರಂದು ನಡೆದ ಕಾರ್ಯಾಚರಣೆಯಲ್ಲಿ ಸಬೀರ್ ಹಾಗೂ ಆತನ 7 ಮಂದಿ ಉದ್ಯೋಗಿಗಳನ್ನು ಬಂಧಿಸಲಾಗಿತ್ತು. ಕಳ್ಳಸಾಗಣೆ ಮಾಡಲೆಂದೇ 7 ಮಂದಿಗೆ ಉದ್ಯೋಗ ನೀಡಿದ್ದ ಸಬೀರ್, ಅವರಿಗೆ ತಲಾ 15,000 ರೂ. ಸಂಬಳದ ಜತೆಗೆ ಒಂದು ಚಿನ್ನದ ಚೆಂಡನ್ನು ಸಾಗಿಸಿದರೆ 5,000 ರೂ. ನೀಡುತ್ತಿದ್ದನು.
300 ಗ್ರಾಂನಷ್ಟು ಚಿನ್ನವನ್ನು ಪೇಸ್ಟ್ ಅಥವಾ ಪುಡಿ ಮಾಡಿ ಒಂದೊಂದು ಸಿಲಿಕಾನ್ ಚೆಂಡುಗಳ ಒಳಗಿರಿಸಿ ತನ್ನ ಉದ್ಯೋಗಿಗಳ ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ ಎಂದು ತನಿಖೆಯಿಂದ ಬಹಿರಂಗಗೊಂಡಿದೆ. ತನ್ನ ಯುಟ್ಯೂಬ್ ಚಾನೆಲ್ ಮೂಲಕವೇ ಸಂಪರ್ಕವನ್ನೂ ಮಾಡುತ್ತಿದ್ದ ಎನ್ನಲಾಗಿದೆ.