ಪಡುಬಿದ್ರಿ : ಪಡುಬಿದ್ರಿ – ಕಾರ್ಕಳ ರಸ್ತೆಯ ಪಡುಬಿದ್ರಿಯ ಕಂಚಿನಡ್ಕ ಪ್ರದೇಶದಲ್ಲಿ ಟೋಲ್ ಪ್ಲಾಝಾ ನಿರ್ಮಿಸಿ ಹೆದ್ದಾರಿ ಸುಂಕ ವಸೂಲಾತಿಯನ್ನು ಮುಂದಿನ ಆ. 16ರಿಂದ ಆರಂಭಿಸಲು ಹಾಸನದ ಭಾರತೀ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ಕೆಆರ್ಡಿಸಿಎಲ್ ಮೂಲಕ ಕಾರ್ಯಾದೇಶ ಲಭಿಸಿದೆ. ಆದರೆ ಈ ಕುರಿತಾದ ಯಾವುದೇ ಆದೇಶವು ಇದುವರೆಗೂ ತಮ್ಮ ಕಚೇರಿಗೆ ಬಂದಿರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.
ಮೂಲ ಸೌಕರ್ಯ ಅಭಿವೃದ್ಧಿಯಾಗಿಲ್ಲ : ಸದ್ಯದ ಸ್ಥಿತಿಯಲ್ಲಿ ಕಂಚಿನಡ್ಕ ಪ್ರದೇಶವು ಜನನಿಬಿಡ ಹಾಗೂ ವಾಹನ ನಿಬಿಡ ಪ್ರದೇಶವಾಗಿದ್ದು, ಇಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಿಲ್ಲ. ಡಿವೈಡರ್ಗಳ ನಿರ್ಮಾಣ, ಸರ್ವೀಸ್ ರಸ್ತೆಗಳ ರಚನೆ, ಶೌಚಾಲಯ ನಿರ್ಮಾಣ, ವಿಶ್ರಾಂತಿ ಗೃಹ ಸಹಿತ ಯಾವುದೂ ನಿರ್ಮಾಣಗೊಂಡಿಲ್ಲ. ಹಾಗಿದ್ದರೂ ಏಕಾಏಕಿ ಟೋಲ್ ಸಂಗ್ರಹಕ್ಕೆ ರಾಜ್ಯ ಸರಕಾರವು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ಟೋಲ್ ಶುಲ್ಕ ನಿಗದಿ : ಮುಂದಿನ ಮೂರು ವರ್ಷಗಳಲ್ಲಿ ಸರಕಾರಕ್ಕೆ ಸಂದಾಯವಾಗಬೇಕಾಗಿರುವ ಸುಂಕದ ಒಟ್ಟು ಮೊಬಲಗನ್ನೂ ಕಾರ್ಯಾದೇಶದಲ್ಲಿ ನಮೂದಿಸಲಾಗಿದೆ. ಈ ಟೋಲ್ನಲ್ಲಿ ಕಾರು, ಜೀಪು ಮುಂತಾದ ಲಘು ವಾಹನಗಳಿಗೆ 20 ರೂ., ಲಘು ವಾಣಿಜ್ಯ ವಾಹನಗಳು 30 ರೂ. ಬಸ್ ಮುಂತಾದ ಎರಡು ಆಕ್ಸೆಲ್ಗಳ ವಾಣಿಜ್ಯ ವಾಹನಗಳು ತಲಾ 65 ರೂ., ಅರ್ಥ್ ಮೂವರ್ ಮುಂತಾದವುಗಳಿಗೆ 100 ರೂ. ಹಾಗೂ ಮಲ್ಟಿ ಆಕ್ಸೆಲ್ ವಾಹನಗಳಿಗೆ 125 ರೂ. ಗಳನ್ನು ನಿಗದಿಪಡಿಸಲಾಗಿದೆ.