ನವದೆಹಲಿ : ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಾಗಿದೆ. ಇದರಲ್ಲಿ, ರಕ್ಷಣಾ ಕ್ಷೇತ್ರಕ್ಕಾಗಿ ಗಿ 6.2 ಲಕ್ಷ ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಸರಿಸುಮಾರು 3.4 ಶೇಕಡಾ ಹೆಚ್ಚಾಗಿದೆ. ಕಳೆದ ವರ್ಷ ರಕ್ಷಣಾ ಕ್ಷೇತ್ರಕ್ಕೆ ಸರ್ಕಾರ 5.93 ಲಕ್ಷ ಕೋಟಿ ರೂ. ಘೋಷಿಸಿತ್ತು. ಒಟ್ಟು ಬಜೆಟ್ ಅನ್ನು ನೋಡಿದರೆ, ರಕ್ಷಣಾ ಕ್ಷೇತ್ರಕ್ಕೆ ಸರ್ಕಾರವು ಗರಿಷ್ಠ ಪಾಲನ್ನು, ಅಂದರೆ ಶೇ 8ರಷ್ಟನ್ನು ಇಟ್ಟುಕೊಂಡಿರುವುದು ಕಾಣಿಸುತ್ತಿದೆ.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಒತ್ತು
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಮಂಗಳವಾರ ಮಂಡಿಸಿದರು. ಈ ಬಜೆಟ್ನಲ್ಲಿ ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮೇಲೆ ಕೇಂದ್ರೀಕರಿಸುವುದರ ಜೊತೆಗೆ ರಕ್ಷಣಾ ಬಜೆಟ್ಗೆ ಗರಿಷ್ಠ ಗಮನ ನೀಡಲಾಗಿದೆ. ಕೇಂದ್ರ ಬಜೆಟ್ ಭಾಷಣದ ಪ್ರತಿಯ ಪ್ರಕಾರ, ಸರ್ಕಾರವು ರಕ್ಷಣೆಗಾಗಿ 6 ಲಕ್ಷದ 21 ಸಾವಿರದ 940 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಈ ಬಜೆಟ್ ಮೂಲಕ ರಕ್ಷಣಾ ಕ್ಷೇತ್ರವನ್ನು ಬಲಪಡಿಸುವ ಜತೆಗೆ ಸ್ವಾವಲಂಬಿಯಾಗಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಕ್ಷಣಾ ಇಲಾಖೆಗೆ ವೇತನಕ್ಕೆಷ್ಟು ಅನುದಾನ?
ರಕ್ಷಣಾ ಬಜೆಟ್ ಅನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ, ಅದರಲ್ಲಿ ಮೊದಲ ಭಾಗವು ಆದಾಯ, ಎರಡನೆಯದು ಬಂಡವಾಳ ವೆಚ್ಚ ಮತ್ತು ಮೂರನೆಯದು ಪಿಂಚಣಿ. ರಕ್ಷಣಾ ವಲಯದಲ್ಲಿ ಸಂಬಳವನ್ನು ಆದಾಯ ಬಜೆಟ್ನಿಂದ ವಿತರಿಸಲಾಗುತ್ತದೆ. ಇದಕ್ಕಾಗಿ 2 ಲಕ್ಷದ 82 ಸಾವಿರದ 772 ಕೋಟಿ ರೂಪಾಯಿ ಇಡಲಾಗಿದೆ. ಇದಲ್ಲದೇ ಬಂಡವಾಳ ವೆಚ್ಚದಿಂದಲೇ ಶಸ್ತ್ರಾಸ್ತ್ರ ಮತ್ತಿತರ ಅಗತ್ಯ ಪರಿಕರಗಳನ್ನು ಖರೀದಿಸಲಾಗಿದ್ದು, ಇದಕ್ಕಾಗಿ ಬಜೆಟ್ ನಲ್ಲಿ 1 ಲಕ್ಷ 72 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಮೂರನೇ ಮತ್ತು ಪ್ರಮುಖ ಭಾಗವೆಂದರೆ ಪಿಂಚಣಿ. ಇದಕ್ಕಾಗಿ ಬಜೆಟ್ನಲ್ಲಿ 1 ಲಕ್ಷದ 41 ಸಾವಿರದ 205 ಕೋಟಿ ರೂ. ಘೋಷಿಸಲಾಗಿದೆ.