ಉತ್ತರ ಕನ್ನಡ : ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟನೇ ದಿನ ನಡೆದ ಕಾರ್ಯಾಚರಣೆಯಲ್ಲಿ 8ನೇ ಶವ ಪತ್ತೆಯಾಗಿದೆ. ಹೌದು, ಜುಲೈ 16ರಂದು ನಾಪತ್ತೆಯಾಗಿದ್ದ 61 ವರ್ಷದ ವೃದ್ಧೆ ಸಣ್ಣಿಗೌಡ ಎಂಬುವವರ ಮೃತದೇಹ ಇದಾಗಿದ್ದು, ಇಂದು(ಮಂಗಳವಾರ) ಗಂಗಾವಳಿ ನದಿಯ ಗಂಗೆಕೊಳ್ಳ ಪ್ರದೇಶದಲ್ಲಿ ಮೃತದೇಹ ಸಿಕ್ಕಿದೆ.
ತಾಲೂಕಿನ ಉಳುವರೆ ನಿವಾಸಿಯಾದ ಇವರು, ಮನೆಯಲ್ಲಿದ್ದ ವೇಳೆ ಶಿರೂರು ಬಳಿ ಗುಡ್ಡ ಕುಸಿದು ಅಪಾರ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ ಬಿದ್ದಿತ್ತು. ಇದರ ರಭಸಕ್ಕೆ ಎದುರಿನ ಮನೆಗೆ ಅಪ್ಪಳಿಸಿತ್ತು. ಪರಿಣಾಮ ಶಿರೂರು ಎದುರಿನ ಉಳುವರೆ ಗ್ರಾಮದ 2 ಮನೆ ಕೊಚ್ಚಿಹೋಗಿತ್ತು. ಎಂಟು ದಿನದ ನಂತರ ಶವವಾಗಿ ಗೋಕರ್ಣ ಭಾಗದ ಗಂಗೆಕೊಳ್ಳದಲ್ಲಿ ಶವ ಪತ್ತೆ ಆಗಿತ್ತು.
ಧಾರಾಕಾರ ಮಳೆ ನಡುವೆಯೇ ಶವಸಂಸ್ಕಾರ
ಧಾರಾಕಾರ ಮಳೆ ನಡುವೆಯೇ ಇಂದು ಗಂಗೆಕೊಳ್ಳದಲ್ಲಿ ಸಿಕ್ಕಿದ್ದ ಉಳವರೆಯ ಸಣ್ಣಿ ಹನುಮಂತ ಗೌಡ ಅವರ ಅಂತ್ಯ ಸಂಸ್ಕಾರ ಮಾಡಲಾಗಿದೆ. ಪುತ್ರ ಮಂಜುನಾಥ್ ಎಂಬುವರಿಂದ ಸಣ್ಣಿ ಗೌಡ ಚಿತೆಗೆ ಅಗ್ನಿಸ್ಪರ್ಷ ಮಾಡಲಾಗಿದೆ. ಇನ್ನು ಮನೆಯ ಮುಂದೆ ಮೃತ ದೇಹ ಬರುತ್ತಿದ್ದಂತೆ ಓಡಿ ಬಂದ ಶ್ವಾನ, ಶವದ ಬಳಿ ಶ್ವಾನದ ಮೌನ ರೋಧನೆ ಕರಳು ಹಿಂಡುವಂತಿತ್ತು. ಜೊತೆಗೆ ಪೂರ್ತಿ ನೆಲಸಮವಾದ ಮನೆಯ ಮುಂದೆಯೇ ಅಂತಿಮ ವಿಧಿವಿಧಾನ ಮಾಡಲಾಗಿದೆ.
ಎಂಟನೇ ದಿನವೂ ಮುಂದುವರೆದಿದ್ದ ಶೋಧಕಾರ್ಯ
ಮಳೆಯ ಅಬ್ಬರ ತಗ್ಗಿದ ಹಿನ್ನೆಲೆ ಎಂಟನೇ ದಿನವೂ ಕಾರ್ಯಾಚರಣೆ ಭರದಿಂದ ಸಾಗಿದ್ದು, NDRF, SDRF, NAVY and army ಸಿಬ್ಬಂಧಿಗಳು ನದಿಯಲ್ಲಿ ನಿರಂತರ ಶೋಧ ಕಾರ್ಯ ಮಾಡುತ್ತಿದ್ದಾರೆ. ಮೃತ ದೇಹದ ಪತ್ತೆಗಾಗಿ ತಂತ್ರಜ್ಞಾನದ ಮೊರೆ ಹೋಗಿರುವ ಜಿಲ್ಲಾಡಳಿತ, ಮೃತ ದೇಹಗಳ ಪತ್ತೆಗೆ ಸತತ ಪ್ರಯತ್ನ ಮಾಡುತ್ತಿದೆ.