ಹಿರಿಯರ ಆಚಾರ-ವಿಚಾರಗಳು, ಆಹಾರಪದ್ಧತಿಗಳು ಉತ್ತಮ ಆರೋಗ್ಯಕ್ಕೆ ನಾಂದಿ: ಸುಲೋಚನಭಟ್

Share with


ಕಲ್ಲಡ್ಕ : ಹಿರಿಯರ ಆಚಾರ ವಿಚಾರಗಳು, ಆಹಾರ ಪದ್ಧತಿಗಳು, ಉತ್ತಮ ಆರೋಗ್ಯಕ್ಕೆ ನಾಂದಿಯಾಗಿತ್ತು. ಆ ರೀತಿಯ ಆಹಾರ ಪದ್ಧತಿಗಳನ್ನು ಇಂದಿನ ಜನಾಂಗಕ್ಕೆ ತಿಳಿಸುವ ಅಗತ್ಯವಿದ್ದು. ಈ ನಿಟ್ಟಿನಲ್ಲಿ ಆಟಿಕೂಟ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಆಹಾರ ಪದ್ಧತಿಗಳು ಕೇವಲ ಆಟಿ ತಿಂಗಳಿಗೆ ಸೀಮಿತವಾಗಿರದೆ ದೈನಂದಿನ ಜೀವನದಲ್ಲೂ ಅವಲಡಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಸುಲೋಚನಾ ಭಟ್ ಅಭಿಪ್ರಾಯ ಪಟ್ಟರು.

ಅವರು ಬುಧವಾರ ಝನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಲ( ರಿ) ಕಲ್ಲಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ.)ವಿಟ್ಲ ಇದರ ಕಲ್ಲಡ್ಕ ವಲಯದ ಬಾಳ್ತಿಲ, ಕಲ್ಲಡ್ಕ, ಗೋಳ್ತಮಜಲು ಎ ಹಾಗೂ ಗೋಳ್ತಮಜಲು ಸಿ ಒಕ್ಕೂಟಗಳ ಸಹಯೋಗದಲ್ಲಿ ಕಲ್ಲಡ್ಕ ನೇತಾಜಿ ಯುವಕ ಮಂಡಲದ ನೇತಾಜಿ ಸ್ಮೃತಿ ಭವನದಲ್ಲಿ ಜರಗಿದ ‘ಆಟಿಡೊಂಜಿ ಲೇಸು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಲ( ರಿ) ಕಲ್ಲಡ್ಕ ದ ಅಧ್ಯಕ್ಷರಾದ ಮೀನಾಕ್ಷಿ ಆರ್ ಪೂಜಾರಿ ವಹಿಸಿದ್ದರು.

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಆಹಾರ ಪದ್ಧತಿಗಳ, ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಯುವ ದೃಷ್ಟಿಯಿಂದ ಆಹಾರಗಳು, ಅವುಗಳ ತಯಾರಿಕ ವಿಧಾನ ಹಾಗೂ ಅವುಗಳಿಂದ ಆಗುವ ಉಪಯೋಗಗಳ ಬಗ್ಗೆ ದಾಖಲೀಕರಣ ಅಗತ್ಯವಿದೆ ಎಂದು ಆಕೃತಿ ಕೇಂದ್ರದ ಕಲ್ಲಡ್ಕದ ನಾಗೇಶ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಮೇಶ್ ಮಾತನಾಡಿ ನಮ್ಮ ಅರೋಗ್ಯ ನಮ್ಮ ಕೈಯಲ್ಲಿದೆ, ಮಕ್ಕಳಿಗೆ ಪೇಟೆಯಲ್ಲಿ ಸಿಗುವ ಜಂಕ್ ಫುಡ್ ಗಳಿಗೆ ಮಾರುಹೋಗದೆ ತಾವು ಮನೆಯಲ್ಲಿ ತಯಾರಿಸಿದ ರುಚಿ ಶುಚಿಯಾದ ಆಹಾರವನ್ನು ನೀಡುವಂತೆ ಕರೆ ನೀಡಿ, ನಮ್ಮ ತುಳುವ ಪರಂಪರೆಯನ್ನು ಮಕ್ಕಳಿಗೆ ತಿಳಿಹೇಳುವ ಕಾರ್ಯ ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವ ಮಾತೆಯರಿಂದ ಆಗಬೇಕು ಎಂದರು.
ವೇದಿಕೆಯಲ್ಲಿ ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮ, ಬಾಳ್ತಿಲ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಹಿರಣ್ಮಯೀ, ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಮೊದಲಾದವರು ಉಪಸ್ಥಿತರಿದ್ದರು.

ಝನ್ಸಿ ರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಲದ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ವಿವಿದ ರೀತಿಯ ಆಟಿ ತಿಂಗಳಲ್ಲಿ ಮಾಡುವ ತಿಂಡಿ ತಿನಸುಗಳನ್ನು ತಯಾರಿಸಿ ತಂದಿದ್ದು ಅದನ್ನು ಪ್ರದರ್ಶಿಸಿ ಅದರ ಉಪಯೋಗದ ಮಾಹಿತಿ ನೀಡಿ ನಂತರ ಸಾಮೂಹಿಕ ಭೋಜನ ಮಾಡಲಾಯಿತು.

ಯಮುನಾ ಟೀಚರ್ ಸ್ವಾಗತಿಸಿ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ವಿದ್ಯಾ ವಂದಿಸಿ, ಮಹಿಳಾ ಮಂಡಲದ ಸದಸ್ಯ ರೇಣುಕ ಕಾರ್ಯಕ್ರಮ ನಿರೂಪಿಸಿದರು.


Share with