ವಿಟ್ಲ: ವಿಟ್ಲ ಸಾಲೆತ್ತೂರು ನಿವಾಸಿ ಜಗನ್ನಾಥ್ ರವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿದ್ದಾರೆ. ಜಗನ್ನಾಥ್‌ರವರು ಕೆಲಸದ ನಿಮಿತ್ತ ವಿದೇಶದಲ್ಲಿದ್ದು ಮನೆಯಲ್ಲಿ ಅವರ ಪತ್ನಿ ವಿಜಯ ಜಗನ್ನಾಥ್ ಹಾಗೂ ಇಬ್ಬರು ಮಕ್ಕಳು ಮಾತ್ರ ವಾಸ ಮಾಡುತ್ತಿದ್ದರು. ಆ.3ರಂದು ವಿಜಯ ತನ್ನ ಮಕ್ಕಳೊಂದಿಗೆ ಈಶ್ವರಮಂಗಲ ಪಂಚೋಡಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದು ಆ.4ರಂದು ವಾಪಾಸು ಹಿಂದಿರುಗಿ ಮನೆಗೆ ಬರುವ ಈ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಎದುರು ಬಾಗಿಲನ ಬೀಗವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿರುವುದು ಕಂಡುಬಂದಿದೆ. ಮನೆಯ ಒಳಗೆ ಬೆಡ್ರೂಮಿನಲ್ಲಿದ್ದ ಕಬ್ಬಿಣದ ಗೋದ್ರೇಜನ್ನು ತೆರೆದು ಅದರ ಲಾಕರನ್ನು ಕಳ್ಳರು ಯಾವುದೋ ಸಾಧನದಿಂದ ಮುರಿದು, ಅದರಲ್ಲಿದ್ದ ಒಟ್ಟು 34 ಗ್ರಾಂ ನಷ್ಟು ಚಿನ್ನ ಹಾಗು 6000/-ರೂ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ವಿದೇಶದ ನೋಟುಗಳು ಹಾಗೂ ನಾಣ್ಯಗಳಿದ್ದ ಡಬ್ಬವನ್ನು ಕದ್ದೊಯ್ದಿದ್ದಾರೆ. ವಿಜಯ ಅವರ ಪುತ್ರಿಯ ಶಾಲಾ ಬ್ಯಾಗ್‌ನಲ್ಲಿದ್ದ ಪುಸ್ತಕವನ್ನು ಎಸೆದು ಬ್ಯಾಗನ್ನು ಕೊಂಡೊಯ್ದಿದ್ದಾರೆ. ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯ 1,42,000/- ರೂ ಆಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಮನೆಯನ್ನು ಕಾವಲು ಕಾಯುತ್ತಿದ್ದ ಎರಡು ಶ್ವಾನಗಳಲ್ಲಿ ಒಂದು ಶ್ವಾನ ಕಾಣೆಯಾಗಿದೆ. ಕಳ್ಳರು ನಾಯಿಯನ್ನೂ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.