2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಭಾರತದ ಖಾತೆಗೆ ನಾಲ್ಕನೇ ಪದಕ ಬಂದು ಬಿದ್ದಿದೆ. ಕಂಚಿನ ಪದಕದ ಪಂದ್ಯದಲ್ಲಿ ಭಾರತ ಹಾಕಿ ತಂಡ, ಸ್ಪೇನ್ ತಂಡವನ್ನು 2-1 ಅಂತರದಿಂದ ಸೋಲಿಸುವ ಮೂಲಕ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಯನ್ನೂ ಮಾಡಿತು. ಇದೀಗ ಭಾರತ ಹಾಕಿ ತಂಡದ ಸಾಧನೆಗೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದ್ದು, ದೇಶದ ಗಣ್ಯರು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ದೇಶದ ಪ್ರಧಾನಿ ಮೋದಿ ಕೂಡ ಹಾಕಿ ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು, ಇದು ಭಾರತಕ್ಕೆ ಸಂದ ಜಯ ಎಂದು ಟ್ವೀಟ್ ಮಾಡಿ, ತಂಡವನ್ನು ಹಾಡಿಹೊಗಳಿದ್ದಾರೆ.