ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ಸ್ಥಳೀಯರಿಗೆ ಆತಂಕ ಸೃಷ್ಟಿ ಮಾಡಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ. ಎರಡು ತಿಂಗಳ ಹಿಂದೆ ಚಿರತೆ ಸ್ಥಳೀಯರಿಗೆ ಕಾಣಿಸಿಕೊಂಡಿದ್ದು ಭಯವನ್ನು ಸೃಷ್ಟಿಮಾಡಿತ್ತು. ಇದೀಗ ಈ ಚಿರತೆ ಬೋನಿಗೆ ಬಿದ್ದಿದ್ದು ಜನರ ಆತಂಕ ದೂರವಾಗಿದೆ.
ಊರಿನಲ್ಲಿ ಚಿರತೆ ಕಾಣಿಸಿಕೊಂಡಿರುವುದಾಗಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು ಈ ಕುರಿತು ಇಲಾಖಾ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದಾರೆ. ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆಯ ಬಳಿ ಎರಡು ತಿಂಗಳ ಹಿಂದೆ ಚಿರತೆ ಹಿಡಿಯಲು ಬೋನ್ ಅಳವಡಿಸಿ ಅದರಲ್ಲಿ ಕೋಳಿ ಇಡಲಾಗಿತ್ತು.
ಕಳೆದ ಮಧ್ಯರಾತ್ರಿ ಚಿರತೆ ಕೋಳಿ ಹಿಡಿಯಲು ಬೋನಿನೊಳಗೆ ನುಗ್ಗಿ ಸೆರೆಯಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಚಿರತೆ ಸೆರೆಯಾಗಿದ್ದು ಸ್ಥಳೀಯ ಆತಂಕ ಕೊಂಚ ಮಟ್ಟಿಗೆ ದೂರವಾಗಿದೆ.