ಮನುಷ್ಯರಂತೆ ಪ್ರಾಣಿಗಳೂ ಕೂಡಾ ದೇವರನ್ನು ಆರಾಧಿಸುತ್ತವೆ, ಪ್ರಾರ್ಥಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿರುವ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಮೊನ್ನೆಯಷ್ಟೆ ಇಲಿಯೊಂದು ಗಣಪನ ಮುಂದೆ ಕೈ ಮುಗಿದು ಕುಳಿತಿದ್ದಂತಹ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು, ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ಕೂರಿಸಿದ್ದ ಸ್ಥಳಕ್ಕೆ ಬಂದಂತಹ ನಾಗರ ಹಾವೊಂದು ಶಿವನ ಕೊರಳಲ್ಲಿ ಕುಳಿತಂತೆ, ಸೀದಾ ಹೋಗಿ ಗಣಪನ ಕೊರಳಲ್ಲಿ ಎಡೆ ಎತ್ತೆ ಕುಳಿತಿದ್ದು, ಈ ದೃಶ್ಯವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಮಹೇಶ್ ಸಾಳ್ವೆ (mahesh_salve) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಗಣೇಶನ ದರ್ಶನ ಪಡೆಯಲು ಬಂದ ನಾಗರಾಜ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಗಣೇಶನ ಮೂರ್ತಿ ಕೂರಿಸಿದಂತಹ ಸ್ಥಳಕ್ಕೆ ನಾಗರ ಹಾವೊಂದು ಸರಸರನೆ ಬರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಬಂದ ಹಾವು ಸೀದಾ ಹೋಗಿ ಗಣಪನ ಕೊರಳಲ್ಲಿ ಎಡೆ ಎತ್ತಿ ಕುಳಿತಿದೆ.