ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Share with

ಮಂಗಳೂರು: ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಹಿತ ಪದೇಪದೆ ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳನ್ನು “ಬ್ಲ್ಯಾಕ್‌ ಸ್ಪಾಟ್‌’ಗಳೆಂದು ಸುಮಾರು 6 ವರ್ಷಗಳ ಹಿಂದೆಯೇ ಗುರುತಿಸಲಾಗಿದ್ದರೂ ಪರಿಣಾಮಕಾರಿ ಪರಿಹಾರ
ಕ್ರಮಗಳು ಇನ್ನೂ ಅನುಷ್ಠಾನ ಗೊಂಡಿಲ್ಲ. ಇಲ್ಲೆಲ್ಲ ಅಪಘಾತಗಳು ಸಂಭವಿಸುತ್ತಲೇ ಇವೆ.

ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ಸಹಿತ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಇಂತಹ ಬ್ಲ್ಯಾಕ್‌ಸ್ಪಾಟ್‌ಗಳ ಕೊಡುಗೆ ಹೆಚ್ಚು. ಕಮಿಷನರೆಟ್‌ ವ್ಯಾಪ್ತಿಯ ಮೂಲ್ಕಿ, ಉಳ್ಳಾಲ, ಮೂಡುಬಿದಿರೆ ಸಹಿತ 15 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ -66ರಲ್ಲಿ 11 ಬ್ಲ್ಯಾಕ್‌ಸ್ಪಾಟ್‌ಗಳು, ರಾಷ್ಟ್ರೀಯ ಹೆದ್ದಾರಿ 73ರಲ್ಲಿ 2 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2016ರಿಂದ ಇದುವರೆಗೆ 47 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ.

ಕ್ರಮವೇನು?
ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2016-18ರಲ್ಲಿ 4 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. 2019-21ರಲ್ಲಿ 34 ಹಾಗೂ 2022-24ರಲ್ಲಿ 9 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ 18 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸೂಚನಾ ಫ‌ಲಕ, ದುರಸ್ತಿ, ನಿರ್ವಹಣೆ ಮೊದಲಾದ ಪರಿಹಾರ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ, ಮುಕ್ಕ, ತಡಂಬೈಲ್‌, ಹೊಸಬೆಟ್ಟು, ಕುಳಾಯಿ, ಜೋಕಟ್ಟೆ ಕ್ರಾಸ್‌, ಕೂಳೂರು, ಕೆಪಿಟಿ, ನಂತೂರು, ರಾಷ್ಟ್ರೀಯ ಹೆದ್ದಾರಿ 73ರ ಬಿಕರ್ನಕಟ್ಟೆ, ಅಡ್ಯಾರ್‌ಕಟ್ಟೆಗಳನ್ನು ಬ್ಲ್ಯಾಕ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.
13 ಸ್ಪಾಟ್‌, 275 ಅಪಘಾತ
ಕಮಿಷನರೆಟ್‌ ವ್ಯಾಪ್ತಿಯ 13 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 275 ಅಪಘಾತಗಳು ಸಂಭವಿಸಿವೆ. ಈ ಪೈಕಿ ನಂತೂರಿನಲ್ಲಿ ಅತ್ಯಧಿಕ ಅಂದರೆ 36 ಅಪಘಾತಗಳು ಸಂಭವಿಸಿವೆ. ಕೆಪಿಟಿಯಲ್ಲಿ 20, ಬಿಕರ್ನಕಟ್ಟೆಯಲ್ಲಿ 30, ಕುಳಾಯಿಯಲ್ಲಿ 32 ಹಾಗೂ ಮುಕ್ಕದಲ್ಲಿ 25 ಅಪಘಾತಗಳು ಸಂಭವಿಸಿವೆ. ಸದ್ಯ ನಂತೂರಿನಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಪಿಟಿಯಲ್ಲಿ ವೆಹಿಕ್ಯುಲರ್‌ ಓವರ್‌ಪಾಸ್‌ ಯೋಜನೆ ನನೆಗುದಿಗೆ ಬಿದ್ದಿದೆ. ಉಳಿದ ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಕೆಯಂತಹ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಮಾತ್ರ ಕೈಗೊಂಡಿದ್ದಾರೆ.


Share with

Leave a Reply

Your email address will not be published. Required fields are marked *