ಮಂಜೇಶ್ವರ: ತಲಪಾಡಿಯ ಕೆ.ಆರ್.ಕನಕದಾಸ್ ಅವರಿಗೆ ಸೇರಿದ ಸ್ತ್ರೀಶಕ್ತಿ ಲಾಟರಿ ಏಜೆನ್ಸಿಯಿಂದ ಪಡೆದ ಟಿಕೆಟ್‌ಗೆ ಕೇರಳದ ಓಣಂ ಬಂಪರ್ ಡ್ರಾದ ಎರಡನೇ ಬಹುಮಾನ ₹ 1 ಕೋಟಿ ಒಲಿದಿದೆ. ಬಹುಮಾನ ಗೆದ್ದ ಮಹಿಳೆ ಹೆಸರು ಮತ್ತು ಊರು ಹೇಳಲು ಇಚ್ಛಿಸಿಲ್ಲ ಎಂದು ಲಾಟರಿ ಅಂಗಡಿ ಮಾಲೀಕ ಕನಕದಾಸ್ ತಿಳಿಸಿದ್ದಾರೆ.
ಇದು ಕನಕದಾಸ್ ಅವರ ಅಂಗಡಿಯಿಂದ ಟಿಕೆಟ್ ಪಡೆದವರಿಗೆ ಸಿಗುತ್ತಿರುವ 6ನೇ ಬಂಪರ್ ಪ್ರಶಸ್ತಿ. 30 ವರ್ಷಗಳಲ್ಲಿ ಕನಕದಾಸ್ ಅವರ ಅಂಗಡಿಯಿಂದ ಹಲವರು ಟಿಕೆಟ್ ಪಡೆದಿದ್ದು, 4 ಮಂದಿಗೆ ₹ 1 ಕೋಟಿ ಒಲಿದಿದೆ. 75 ಲಕ್ಷ ಮತ್ತು ₹ 80 ಲಕ್ಷ ಇಬ್ಬರಿಗೆ ಸಿಕ್ಕಿದೆ. ಈ ಬಾರಿ ಬಹುಮಾನ ಗೆದ್ದ ಮಹಿಳೆ ಸ್ತ್ರೀಶಕ್ತಿ ಲಾಟರಿ ಅಂಗಡಿಯ ಸಿಬ್ಬಂದಿ ಗಾಯತ್ರಿ ಎಂಬುವರಿಂದ ಟಿಕೆಟ್ ಪಡೆದಿದ್ದರು.
ಲಾಟರಿ ಗಳಿಸಿದ ಪ್ರತಿಯೊಬ್ಬರಿಗೂ ಮಂಜೇಶ್ವರ ಸರ್ವಿಸ್ ಕೊ- ಆಪರೇಟಿವ್ ಬ್ಯಾಂಕ್ ಮೂಲಕ ಹಣ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಹಿಂದೆ ಬೇರೆ ರಾಜ್ಯದವರಿಗೆ ಲಾಟರಿ ಕೊಡದಂತೆ ಕಾನೂನು ರಚಿಸಲಾಗಿತ್ತು. ಆದರೆ, ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ ನಿಯಮ ಬದಲಾಯಿಸಲಾಯಿತು. ಸರ್ಕಾರದ ಕಾನೂನು ಪಾಲಿಸಿ ಪಾಲಕ್ಕಾಡ್ ವಿಭಾಗದ ಲಾಟರಿಗಳನ್ನಷ್ಟೇ ಮಾರಾಟ ಮಾಡುತ್ತಿದ್ದೇನೆ ಎಂದು ಕನಕದಾಸ್ ತಿಳಿಸಿದರು.
ನಾನು ನೀಡಿದ ಟಿಕೆಟ್‌ಗೆ ₹ 1 ಕೋಟಿ ಬಂತೆಂದು ಮಹಿಳೆ ಹೇಳಿದಾಗ ನಾನೂ ಸಂಭ್ರಮಿಸಿದೆ ಎಂದು ಅಂಗಡಿ ಸಿಬ್ಬಂದಿ ಗಾಯತ್ರಿ ತಿಳಿಸಿದರು.