ಬೆಂಗಳೂರು: ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಟ್ರಸ್ಟ್ಗೆ ಕೆಐಎಡಿಬಿಯಿಂದ 5 ಎಕರೆ ಭೂಮಿಯನ್ನು ನೀಡಲಾಗಿತ್ತು. ಬೆಂಗಳೂರಿನ ಏರೋಸ್ಪೇಸ್ ಬಳಿ ಭೂಮಿ ಮಂಜೂರು ಮಾಡಿದ್ದ ಕೆಐಎಡಿಬಿ. ಆದರೆ ಈಗ ಭೂಮಿ ನೀಡಿದ ಕ್ರಮ ವಿವಾದದ ಸ್ವರೂಪ ಪಡೆದ ಹಿನ್ನೆಲೆ, ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ನೀಡಲಾದ 5 ಎಕರೆ ಕೆಐಎಡಿಬಿ ಭೂಮಿಯನ್ನು ಕೆಐಎಡಿಬಿಗೆ ಹಿಂದಿರುಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಟ್ರಸ್ಟ್ ಕೆಐಎಡಿಬಿಗೆ ಪತ್ರ ಬರೆದು ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿದೆ.
ಸಿಎಂ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ನೀಡಿದ ಬೆನ್ನಲ್ಲೇ ಖರ್ಗೆ ಕುಟುಂಬ ಸಿಎ ಸೈಟ್ ಹಿಂದಿರುಗಿಸಲು ಚಿಂತನೆ ನಡೆಸಿದ್ದಾರೆ. 15 ದಿನಗಳ ಹಿಂದೆಯೇ ಭೂಮಿ ವಾಪಸ್ ಕೊಡಲು ಚಿಂತನೆ ನಡೆಸಿದ್ದಾರೆ. ಅಲ್ಲದೆ, ಪ್ರಿಯಾಂಕ್ ಖರ್ಗೆ, ಭೂಮಿ ವಾಪಸ್ ಕ್ರಮದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಭೂಮಿ ವಾಪಸ್ ಪಡೆಯುವ ಮುನ್ನ ಕೆಐಎಡಿಬಿ ಆಡಳಿತ ಮಂಡಳಿ ಸಭೆ ನಡೆಯಬೇಕು, ಬಳಿಕ ಸರ್ಕಾರದ ಅನುಮತಿ ಪಡೆದು ಭೂಮಿ ಹಂಚಿಕೆ ರದ್ದು ಮಾಡಬೇಕು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಹಾಗೂ ಕೆಐಎಡಿಬಿ ಕಾನೂನಾತ್ಮಕ ಅಂಶಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕ್ ಖರ್ಗೆ, ನಮಗೆ ಕೊಟ್ಟ ಸಿಎ ಸೈಟ್ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ರಾಜಕೀಯದಿಂದ ಬೇಸರವಾಗಿ ಸಿಎ ಸೈಟ್ ಬೇಡವೆಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಅಲ್ಲದೆ, ಸೈಟ್ ವಾಪಸ್ ಕೊಡೋದಾಗಿ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರನ್ನೇ ಕೇಳಿ ಎನ್ನುವ ಮೂಲಕ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ. ಒಟ್ಟಿನಲ್ಲಿ ಸಿಎಂ ಬೆನ್ನಲ್ಲೇ ಅಕ್ರಮದ ತೂಗುಕತ್ತಿಯಿಂದ ತಪ್ಪಿಸಿಕೊಳ್ಳೋಕೆ ಖರ್ಗೆ ಕುಟುಂಬ ಕೂಡ ಸೈಟ್ ವಾಪಸ್ ಮಾಡೋಕೆ ನಿರ್ಧರಿಸಿದ್ದು. ಇದು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆಯಾ ಅನ್ನೋ ಅನುಮಾನಗಳು ಕೂಡ ದಟ್ಟವಾಗಿವೆ.