ನವರಾತ್ರಿಯ ವೇಷ ಪುತ್ತೂರಿನ ಈ ಗ್ರಾಮಕ್ಕೆ ನಿಷೇಧ..!! ಅಷ್ಟಕ್ಕೂ ಯಾವುದು ಆ ಗ್ರಾಮ..!?

Share with

ಪುತ್ತೂರು: ದುರ್ಗಾದೇವಿಯ ಒಂಭತ್ತು ವಿಭಿನ್ನ ರೂಪಗಳಿಗನುಗುಣವಾಗಿ ನಾರಿಯರು ವರ್ಣಮಯ ಉಡುಗೆ ತೊಡುಗೆಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ದೇವಿಯ ಆರಾಧನೆಯಲ್ಲಿ ನಿರತರಾಗಿರುತ್ತಾರೆ. ಇದರ ಜತೆಗೆ ನವರಾತ್ರಿಯ ವೇಳೆ ತಾಸೆ, ಬ್ಯಾಂಡ್‍ಗಳ ಸದ್ದಿನೊಂದಿಗೆ ವಿವಿಧ ವೇಷಗಳು ಕಾಣಸಿಗುತ್ತದೆ. ಹುಲಿ ವೇಷ, ಕರಡಿ ವೇಷ, ಹಾಸ್ಯಗಾರರು, ಪ್ರೇತ, ರಾಕ್ಷಸ ವೇಷಗಳು ಎಲ್ಲೆಡೆಯೂ ಸುತ್ತಾಡುತ್ತಾ ಧನ ಸಂಗ್ರಹ ಮಾಡುತ್ತಾರೆ. ಆದರೆ, ಇಂತಹ ವೇಷಧಾರಿಗಳು ಮಾತ್ರ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಂದು ಗ್ರಾಮದಲ್ಲಿ ಕಂಡು ಬರುವುದಿಲ್ಲ. ಅದುವೇ ಪುತ್ತೂರಿನ ಬಲ್ನಾಡು ಗ್ರಾಮ.

ಬಲ್ನಾಡಿನ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ಕಾರಣಿಕದ ಕ್ಷೇತ್ರ. ಈ ಗ್ರಾಮದ ಪ್ರಮುಖ ದೈವವಾಗಿರುವ ಉಳ್ಳಾಲ್ತಿಯ ಕಾರಣಿಕದ ಹಿನ್ನಲೆಯಲ್ಲಿ ಇಲ್ಲಿಗೆ ನವರಾತ್ರಿಯ ವೇಷಗಳು, ಮನೆ ಮನೆ ಯಕ್ಷಗಾನ ವೇಷಗಳು ಬರುವುದೇ ಇಲ್ಲ. ಒಂದು ವೇಳೆ ಇಲ್ಲಿಗೆ ಬಂದರೆ ಅವರಿಗೆ ತೊಂದರೆ ತಪ್ಪಿದ್ದಲ್ಲ ಎಂಬ ಪ್ರಬಲ ನಂಬಿಕೆ ಈ ಗ್ರಾಮದ ಜನರದ್ದು. ಮಾತ್ರವಲ್ಲದೆ ಇದಕ್ಕೆ ಹತ್ತು ಹಲವು ನಿದರ್ಶನಗಳು ಗ್ರಾಮಸ್ಥರ ಕಣ್ಣ ಮುಂದೆ ನಡೆದು ಬಿಟ್ಟಿವೆ.

ಹರಕೆ ರೂಪದಲ್ಲಿ ಕೊರಗ ವೇಷ ಧರಿಸುತ್ತಿದ್ದ ಸಮಯದಲ್ಲಿ ಈ ಗ್ರಾಮದ ಮನೆ ಮನೆಗಳಿಗೆ ತೆರಳುವವರಿಗೆ ಈ ನಿರ್ಬಂಧದಿಂದ ಆ ಸಮಯದಲ್ಲಿ ರಿಯಾಯಿತಿ ಇತ್ತು. ಯಾಕೆಂದರೆ ಅವರು ಕೇವಲ ಕಪ್ಪು ವರ್ಣವನ್ನಷ್ಟೇ ಬಳಿದುಕೊಂಡಿರುತ್ತಾರೆ. ಕಪ್ಪು ಬಣ್ಣವನ್ನು ಹೊರತುಪಡಿಸಿದ ಇತರ ಯಾವುದೇ ಬಣ್ಣದ ವೇಷಗಳಿಗೆ ಇದರಿಂದ ರಿಯಾಯಿತಿ ಇಲ್ಲ. ಬಲ್ನಾಡಿನ ಈ ನಿಯಮ ಕೇವಲ ಬಲ್ನಾಡು ಗ್ರಾಮಕ್ಕೆ ಮಾತ್ರ ಅನುಸರಿಸುತ್ತದೆ.

ಬಲ್ನಾಡಿನ ಉಳ್ಳಾಲ್ತಿ ಬಹಳಷ್ಟು ಕಾರಣಿಕವನ್ನು ಹೊಂದಿದ್ದು, ಈ ದೈವವನ್ನು ಮತ್ಸರ ಸಂಗಡಿ’(ಮತ್ಸರದ ತಂಗಿ) ಎಂದೂ ಕರೆಯುತ್ತಾರೆ. ಆದರೆ, ದೈವದ ಈ ಮತ್ಸರ ಭಕ್ತಾದಿಗಳಿಗೆ ಅನ್ವಯವಾಗುವುದಿಲ್ಲ. ವಿಪರೀತವಾಗಿ ವೇಷ ಭೂಷಣ ಮಾಡುವ ಹೆಂಗೆಳೆಯರಿಗೆ ಇದರಿಂದದೃಷ್ಟಿ’ ತಾಗುತ್ತದೆ ಎಂಬ ನಂಬಿಕೆ ಊರಿನವರದ್ದು. ಚಿನ್ನದ ಮುಗುರು ಮಲ್ಲಿಗೆ(ಮಲ್ಲಿಗೆ ಮೊಗ್ಗು) ಧರಿಸಿ ಹೋದ ಹೆಂಗಸು ಅಸ್ವಸ್ಥಗೊಂಡದ್ದು, ಅದಾದ ಬಳಿಕ ಆಕೆ ಮುಗುರು ಮಲ್ಲಿಗೆ ದೈವಕ್ಕೆ ಸಲ್ಲಿಸಿದ್ದು ಇಲ್ಲಿನ ಐತಿಹ್ಯ.

ಈ ಹಿನ್ನಲೆಯಲ್ಲಿ ದೈವಕ್ಕೆ ನೇಮೋತ್ಸವ ನಡೆಯುವ ಸಂದರ್ಭ ದೈವಕ್ಕೆ ಮುಗುರು ಮಲ್ಲಿಗೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಈ ಹಿನ್ನಲೆಯಲ್ಲಿ ಬಲ್ನಾಡು ಗ್ರಾಮಕ್ಕೆ ರಂಗು ರಂಗಿನ ವೇಷಗಳು ಪ್ರವೇಶಿಸುವುದೇ ಇಲ್ಲ.


Share with

Leave a Reply

Your email address will not be published. Required fields are marked *