ಬೆಳಗಾವಿ, (ಅಕ್ಟೋಬರ್ 20): ಶಾಲೆ, ಹೋಟೆಲ್ ಹಾಗೂ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾವಳಿ ಹೆಚ್ಚಾಗಿದೆ. ಅದರಲ್ಲೂ ನಿನ್ನೆ (ಅಕ್ಟೋಬರ್ 19) ಒಂದೇ ದಿನ ವಿವಿಧ ವಿಮಾನ ಸಂಸ್ಥೆಗೆ ಸೇರಿದ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಇದರಲ್ಲಿ ಚೆನ್ನೈ-ಬೆಳಗಾವಿ ವಿಮಾನವು ಸಹ ಸೇರಿದೆ. ಹೌದು… ಚೆನ್ನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಮೇಲ್ ಬಂದಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು, ಇ-ಮೇಲ್ ಎಲ್ಲಿಂದ ಬಂದಿದೆ ಎನ್ನುವುದನ್ನು ತನಿಖೆ ನಡೆಸಿದ್ದಾರೆ.
ಚೆನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿ ಏರ್ಪೋರ್ಟ್ ಅಥಾರಿಟಿಗೆ ಮೇಲ್ ಬಂದಿದೆ. ಹೀಗಾಗಿ ಬೆಳಗಾವಿಗೆ ಚೆನೈನಿಂದ ವಿಮಾನ ಸಂಪರ್ಕ ಕಡಿತಗೊಳಸಲಾಗಿದೆ. ಇನ್ನು ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇ ಮೇಲ್ ಎಲ್ಲಿಂದ ಬಂದಿದೆ? ಯಾರು ಮಾಡಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗೆ ಬಾಂಬ್ ಬೆದರಿಕೆ ಹಾವಳಿ ಹೆಚ್ಚಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆ, ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಹಾಕಲಾಗುತ್ತಿದೆ. ಇದೀಗ ವಿಮಾನಯಾನ ಸಂಸ್ಥೆಗಳಿಗೂ ಕಾಲಿಟ್ಟಿದೆ. ಕೇವಲ ಹುಸಿಬಾಂಬ್ ಬೆದರಿಕೆಯಾಗಿದ್ದು, ವಿಮಾನಯಾನ ಸಂಸ್ಥೆಗಳು ಹಾಗೂ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.