ಬೆಂಗಳೂರು: ಕೊಲ್ಲೂರಿನ ಪಡುವರಿ ಸೋಮೇಶ್ವರ, ಗೋಕರ್ಣ, ಸವದತ್ತಿ ಯಲ್ಲಮ್ಮ ದೇಗುಲ, ರೋರಿಚ್ ಎಸ್ಟೇಟ್ ಸೇರಿದಂತೆ ರಾಜ್ಯದ 7 ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟಕ್ಕೆ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಮುಂದಾಗಿದ್ದು ಈ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ದೇಶದಲ್ಲಿನ ಸಾಂಪ್ರದಾಯಿಕ ಮತ್ತು ಪಾರಂಪರಿಕ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅವುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ರಾಜ್ಯಗಳಿಗೆ ಬಂಡವಾಳ ಹೂಡಿಕೆಗೆ ವಿಶೇಷ ನೆರವು (ಎಸ್‌ಎಎಸ್‌ಸಿಐ) ಯೋಜನೆಯಡಿ ರಾಜ್ಯದಲ್ಲಿ ಆಯ್ದ ಧಾರ್ಮಿಕ ಸ್ಥಳಗಳು ಹಾಗೂ ಪ್ರವಾಸಿ ಯಾತ್ರಾ ತಾಣಗಳು ಸೇರಿ ಒಟ್ಟು ಏಳು ಸ್ಥಳಗಳನ್ನು ಆಯ್ಕೆ ಮಾಡಿ ಒಟ್ಟು 664 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕಳೆದ ವಾರ ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಮಾರ್ಗಸೂಚಿಯಂತೆ ಸಂಬಂಧಪಟ್ಟ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ತಾಣಗಳ ಬಗ್ಗೆ ಆಯಾ ಜಿಲ್ಲಾಡಳಿತದಿಂದ ಸಮಗ್ರ ಯೋಜನಾ ವರದಿ ತರಿಸಿಕೊಂಡು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೇಂದ್ರ ಸರಕಾರದ ಹಂತದಲ್ಲಿನ ಎಲ್ಲ ಪ್ರಕ್ರಿಯೆ ಮುಗಿದು ರಾಜ್ಯ ಸರಕಾರದ ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕರೆ ಮುಂದಿನ ಪ್ರಕ್ರಿಯೆಗಳು ಆರಂಭವಾಗಲಿದೆ. ಒಂದೊಂದು ಸ್ಥಳದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಾಲಮಿತಿ ಸಹ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.