ಮಡಿಕೇರಿ, ಅಕ್ಟೋಬರ್ 30: ಮೊದಲು ಮಕ್ಕಳಿರಲವ್ವ ಮನೆ ತುಂಬಾ ಎನ್ನುವ ಕಾಲವಿತ್ತು. ಆಮೇಲೆ ಆರತಿಗೊಂದು ಕೀರುತಿಗೊಂದು ಎನ್ನುವ ಕಾಲ ಬಂತು. ಈಗ ಒಂದೇ ಮಗು ಸಾಕಪ್ಪ ಅನ್ನೋ ಕಾಲಬಂದಿದೆ. ಆದರೆ ಕೊಡಗಿನಲ್ಲಿ ಕೊಡವ (Kodava) ಕುಟಂಬ ಉಳಿಸಲು ವಿಶಿಷ್ಟ ಪ್ರಯತ್ನವೊಂದನ್ನು ಕೈಗೊಳ್ಳಲಾಗಿದೆ. ಮನೆ ತುಂಬಾ ಮಕ್ಕಳು ಮಾಡುವ ಪೋಷಕರಿಗೆ 25 ಸಾವಿರ ರೂ.ದಿಂದ ಒಂದು ಲಕ್ಷ ರೂ. ದವರೆಗೆ ಬಹುಮಾನ ನೀಡಲಾಗುತ್ತಿದೆ.
ತಮ್ಮ ಜನಾಂಗಕ್ಕೆ ಹೆಚ್ಚು ಮಕ್ಕಳನ್ನ ಮಾಡಿಕೊಳ್ಳುವಂತೆ ಆಫರ್ ನೀಡಿದ ಕೊಡವ ಸಮಾಜಗಳು
ಕೊಡಗು ಜಿಲ್ಲೆ ಅತಿ ವಿಶಿಷ್ಟ ಸಂಸ್ಕೃತಿ ಪದ್ಧತಿ ಪರಂಪರೆಗೆ ಹೆಸರಾದ ಜಿಲ್ಲೆ. ಇಲ್ಲಿನ ಕೊಡವ ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಹಾಗಾಗಿಯೇ ಸಾಂಸ್ಕೃತಿಕವಾಗಿ ಕೊಡಗು ಜಿಲ್ಲೆ ಅತಿಸೂಕ್ಷ್ಮ ಪ್ರದೇಶ ಅಂತಾನೇ ಪರಿಗಣಿತವಾಗಿದೆ. ಆದರೆ ಇತ್ತೀಚಿನ ವರ್ಷಗಳಿಂದ ಕೊಡವರು ಸಾಂಸ್ಕೃತಿಕವಾಗಿ ಅದಃಪತನದತ್ತ ಸಾಗುತ್ತಿದ್ದಾರೆ ಅನ್ನೋ ಆತಂಕ ಜನರನ್ನ ಕಾಡುತ್ತಿದೆ. ಎಲ್ಲರೂ ತಮ್ಮ ಉದ್ಯೋಗಕ್ಕಾಗಿ ದೂರದ ಊರಿಗೆ ತೆರಳಿ ಅಲ್ಲೇ ಜೀವನ ಮಾಡುತ್ತಿದ್ದಾರೆ. ಜೊತೆಗೆ ಒಂದೇ ಮಗು ಸಾಕು ಅಂತ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ.
ಕೊಡವ ಸಮಾಜದ ನಿಲುವುಗಳನ್ನು ಸ್ವಾಗತಿಸುವುದೂ ಅಲ್ಲದೆ, ಜಿಲ್ಲೆಯ ಇತರೆ ಕೊಡವ ಸಮಾಜಗಳೂ ಇಂತಹ ಪ್ರೋತ್ಸಾಹ ನೀಡಲು ಮುಂದೆ ಬರಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಕರೆ ನೀಡಿದ್ದಾರೆ. ಯಾವುದೇ ಒಂದು ಪ್ರದೇಶದಲ್ಲಿ ಅಭಿವೃದ್ಧಿ ಹಾಗೂ ಆಧುನೀಕತೆಯ ಪ್ರವಾಹದಲ್ಲಿ ಸಾಂಸ್ಕೃತಿಕ ಅತಿಸೂಕ್ಷ್ಮ ಪಂಗಡಗಳು ಅವಸಾನವಾಗುತ್ತಿರುವುದು ಹೊಸದೇನಲ್ಲ. ಆದರೆ ಇದರ ಸಾಲಿಗೆ ನಮ್ಮ ಕೊಡವ ಜನಾಂಗ ಕೂಡ ಸೇರುತ್ತಿರುವುದು ಮಾತ್ರ ವಿಪರ್ಯಾಸ. ಈ ನಿಟ್ಟಿನಲ್ಲಿ ಕೊಡವ ಸಮಾಜಗಳ ಈ ಪ್ರಯತ್ನ ಆಶಾದಾಯಕವಾಗಿದೆ.