ವಿಟ್ಲ :ಬಂಟ್ವಾಳ ತಾಲೂಕಿನ ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭವು ನವೆಂಬರ್ 22 ರಂದು ಜನತಾ ಪದವಿಪೂರ್ವ ಕಾಲೇಜಿನ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಕೆ.ಇ.ಆರ್.ಎಸ್, ಕೆ. ಆರ್. ಸಾಗರ, ಮಂಡ್ಯ ಜಿಲ್ಲೆ ಇಲ್ಲಿನ ಕರಾವಳಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಮುಖ್ಯ ಸಂಶೋಧನಾಧಿಕಾರಿ ಗಿರೀಶ್ ಕೆ. ಅವರು ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಂತೆ ಸಹಪಠ್ಯ ಚಟುವಟಿಕೆಗಳಲ್ಲೂ ಮುಂದೆ ಬರಬೇಕು. ಒಳ್ಳೆಯ ಧ್ಯೇಯದೊಂದಿಗೆ ಭವಿಷ್ಯದ ಸತ್ಪ್ರಜೆಗಳಾಗಬೇಕು ಎಂದರು. ಹಾಗೂ ತಾವು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ದಿನಗಳನ್ನು ನೆನಪಿಸಿಕೊಂಡು ಸಂಸ್ಥಾಪಕರನ್ನು ಸ್ಮರಿಸಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಸಾಯ ಕೃಷ್ಣ ಭಟ್ ಹಾಗೂ ವಾರಣಾಶಿ ಸುಬ್ರಾಯ ಭಟ್ ಅವರ ಜನಪರ ಕಾಳಜಿಯ ಫಲವಾಗಿ ಈ ವಿದ್ಯಾಸಂಸ್ಥೆಗಳು ಜನ್ಮತಾಳಿ ಇಂದು ಖ್ಯಾತಿ ಪಡೆಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಸಂಸ್ಥಾಪಕರನ್ನು ಸ್ಮರಿಸುವ ಪುಣ್ಯದಿನವಿದು ಎಂದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಪ್ರಸ್ತಾವನೆಗೈದರು. ಜನತಾ ಪದವಿಪೂರ್ವ
ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ದತ್ತಿನಿಧಿಯ ವರದಿಯನ್ನು ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ವಾಚಿಸಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು, ಆಡಳಿತ ಮಂಡಳಿಯ ಕೋಶಾಧಿಕಾರಿ ಕೇಶವ ಭಟ್ ಚವರ್ಕಾಡು, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ದಿ| ವಾರಣಾಶಿ ಸುಬ್ರಾಯ ಭಟ್ ಹಾಗೂ ದಿ| ಸಾಯ ಕೃಷ್ಣ ಭಟ್ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ದತ್ತಿನಿಧಿ ಬಹುಮಾನಗಳು, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಆಡಳಿತ ಮಂಡಳಿಯ ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು.
ಪೂರ್ವಾಹ್ನ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅವರು ಸಂಸ್ಥೆಯ ಧ್ವಜಾರೋಹಣ ನೆರವೇರಿಸಿದರು. ದಿ| ಪಾರ್ವತಿ ಅಮ್ಮ ಹಾಗೂ ಅವರ ಮಗ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಿ| ನಾರಾಯಣ ಜೋಶಿ ಚವರ್ಕಾಡು ಅವರ ಸ್ಮರಣಾರ್ಥ ಅವರ ಪತ್ನಿ ಸರೋಜಾ ನಾರಾಯಣ ಜೋಶಿ ಅವರಿಂದ ಸಿಹಿತಿಂಡಿ ವಿತರಣೆ ನಡೆಯಿತು. ಜನತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸ್ಫೂರ್ತಿಗೀತೆ ಹಾಡಿದರು. ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಾಯಕ ಮಹಮ್ಮದ್ ಅಫ್ಲಾಹ್, ಸಾನಿಬ ಸುಲ್ತಾನ ಹಾಗೂ ಯಶಸ್ವಿನಿ ನಿರೂಪಣೆಯನ್ನು ನಡೆಸಿಕೊಟ್ಟರು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ ಎಂ. ವಂದಿಸಿದರು.