ರೇಣುಕಾಸ್ವಾಮಿ ಅಪಹರಣ ಆಗಿರಲಿಲ್ಲ, ಕೊಲೆ ಮಾಡುವ ಉದ್ದೇಶವೂ ಇರಲಿಲ್ಲ’; ದರ್ಶನ್ ಪರ ವಕೀಲರ ವಾದ

Share with

ರೇಣುಕಾ ಸ್ವಾಮಿ ಕೊಲೆ ಕೇಸ್ ಆರೋಪ ಹೊತ್ತಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಇಂದು (ನವೆಂಬರ್ 26) ನಡೆದಿದೆ. ಕೆಳ ಹಂತದ ಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ತಿರಸ್ಕಾರ ಗೊಂಡಿತ್ತು. ಈ ಕಾರಣಕ್ಕೆ ದರ್ಶನ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಯುವಾಗ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ತಮ್ಮ ವಾದ ಮುಂದಿಟ್ಟಿದ್ದಾರೆ.

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಆರೋಪ ದರ್ಶನ್ ಮೇಲೆ ಇದೆ. ಅಪಾರ್ಟ್ಮೆಂಟ್ ಕಾವಲುಗಾರ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಯಿತು. ಇಲ್ಲಿ ಮೃತದೇಹದ ಮಹಜರು, ಪೋಸ್ಟ್ ಮಾರ್ಟಂ ವಿಳಂಬ ಮಾಡಲಾಗಿದೆ. 1.5X2.5 ಸೆಂ.ಮೀ. ಗಾಯ ಬಿಟ್ಟರೆ ಉಳಿದವು ರಕ್ತಗಾಯಗಳಲ್ಲ’ ಎಂದಿದ್ದಾರೆ ನಾಗೇಶ್.

‘ಶವ ಶೈತ್ಯಾಗಾರದಲ್ಲಿ ಇಟ್ಟಿದ್ದರಿಂದ ಸಾವಿನ ನಿಖರ ಸಮಯ ಸಿಕ್ಕಿಲ್ಲ. ಶವದ ಫೋಟೋ ಆಧಾರದಲ್ಲಿ ಸಾವಿನ ಸಮಯ ಅಂದಾಜಿಸಲಾಗಿದೆ. ಶವಪರೀಕ್ಷೆ ವರದಿ ಒಂದು ತಿಂಗಳು ವಿಳಂಬವಾಗಿ ಬಂದಿದೆ’ ಎಂದು ಸಿವಿ ನಾಗೇಶ್ ವಾದ ಮಾಡಿದ್ದಾರೆ. ಈ ಮೂಲಕ ದರ್ಶನ್ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.

ಅಪಹರಣ ಅಲ್ಲ
ಯಾವುದೇ ಮೋಸದಿಂದ ಅಥವಾ ಬಲವಂತದಿಂದ ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಲಾಗಿಲ್ಲ ಎಂಬ ವಿಚಾರವನ್ನು ವಕೀಲರು ಒತ್ತಿ ಒತ್ತಿ ಹೇಳಿದ್ದಾರೆ.  ‘ಈಗಾಗಲೇ ಮೃತನ ತಂದೆಯ ಹೇಳಿಕೆಯನ್ನು ಪಡೆಯಲಾಗಿದೆ. ಅದರಲ್ಲಿ ಜೂ.8ರಂದು ರೇಣುಕಾಸ್ವಾಮಿ ಎಂದಿನಂತೆ ಕೆಲಸಕ್ಕೆ ಹೋದ ಬಗ್ಗೆ ವರದಿ ಇದೆ. ಹಳೆಯ ನಾಲ್ವರು ಸ್ನೇಹಿತರೊಂದಿಗೆ ಹೋಗುತ್ತೇನೆಂದು ತಾಯಿ ಬಳಿ ಹೇಳಿದ್ದಾಗಿ ಹೇಳಿಕೆ ದಾಖಲಿಸಲಾಗಿದೆ. ರೇಣುಕಾಸ್ವಾಮಿ ದಿನನಿತ್ಯ ಧರಿಸುವ ಯೂನಿಫಾರ್ಮ್ ಧರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲವೆಂದು ಫೋನ್ ಮಾಡಿ ತಿಳಿಸಿದ್ದ. ಹೀಗಾಗಿ ಇದನ್ನು ಕಿಡ್ನ್ಯಾಪ್ ಎಂದು ಹೇಳಲು ಸಾಧ್ಯವಿಲ್ಲ. ಇದರಲ್ಲಿ ಒತ್ತಾಯವೂ ಇಲ್ಲ, ಮೋಸವೂ ಇಲ್ಲ’ ಎಂದು ವಕೀಲರು ವಾದ ಮಂಡಿಸಿದ್ದಾರೆ.

‘ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗುವಾಗ ಬಾರ್ಗೆ ಹೋಗಿದ್ದಾರೆ. ರೇಣುಕಾಸ್ವಾಮಿ ಫೋನ್ ಪೇ ಮೂಲಕ ಬಾರ್ಗೆ ಹಣ ಪಾವತಿಸಿದ್ದಾನೆ. ಈ ಬಗ್ಗೆ ಬಾರ್ನ ಮಾಲೀಕನ ಹೇಳಿಕೆ ದಾಖಲಿಸಲಾಗಿದೆ. ಅಪಹರಣಕ್ಕೊಳಗಾದವನು 640 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಹಣ ನೀಡಲು ಸಾಧ್ಯವೇ’ ಎಂದು ನಾಗೇಶ್ ವಾದ ಮಂಡಿಸಿದ್ದಾರೆ. ಈ ಮೂಲಕ ಇದು ಕಿಡ್ನ್ಯಾಪ್ ಅಲ್ಲ ಎಂದು ನಾಗೇಶ್ ವಾದ ಮಂಡಿಸಿದ್ದಾರೆ.

ಸಾಕ್ಷಿ ನಾಶ ಆಗಿಲ್ಲ
‘ಕೊಲೆಯಾಗಿದೆಯೋ ಇಲ್ಲವೋ ಬೇರೆ ವಿಚಾರ. ಆದರೆ ಕೊಲೆಯ ಉದ್ದೇಶದಿಂದ ಕಿಡ್ನ್ಯಾಪ್ ಆಗಿಲ್ಲ. ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸಾಕ್ಷ್ಯನಾಶವಲ್ಲ’ ಎಂದಿರುವ ಸಿವಿ ನಾಗೇಶ್ ಅವರು ಅಲಹಾಬಾದ್ ಹೈಕೋರ್ಟ್ನ ತೀರ್ಪು ಉಲ್ಲೇಖಿಸಿದರು. ‘ಮೃತದೇಹವನ್ನು ಸುಟ್ಟುಹಾಕಿದ್ದರೆ ಸಾಕ್ಷ್ಯನಾಶ ಪರಿಗಣಿಸಬಹುದಿತ್ತು. ಆದರೆ ಆ ರೀತಿ ಆಗಿಲ್ಲ, ಕೇವಲ ಮೃತದೇಹ ಸ್ಥಳಾಂತರಿಸಲಾಗಿದೆ’ ಎಂದು ನಾಗೇಶ್ ಹೇಳಿದರು.


Share with

Leave a Reply

Your email address will not be published. Required fields are marked *