ಮಂಗಳೂರು: ಕರಾವಳಿಯ ಜನಪ್ರಿಯ ಹಾಗೂ ಸಾಹಸ ಕ್ರೀಡೆ ಕಂಬಳವನ್ನು ಶಿಸ್ತುಬದ್ಧವಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನವಾಗುವಂತೆ ಕೈಗೊಳ್ಳಲು “ಕಂಬಳ ರಾಜ್ಯ ಅಸೋಸಿಯೇಶನ್’ ರಚಿಸಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ಮಾನ್ಯತೆ ಪಡೆಯುವ ಪ್ರಕ್ರಿಯೆಗೆ ರಾಜ್ಯ ಸರಕಾರ ಹಸುರು ನಿಶಾನೆ ತೋರಿಸಿದೆ.
ಈ ಸಂಬಂಧ ಅಂತಿಮ ಒಪ್ಪಿಗೆಯನ್ನು ನಿರೀಕ್ಷಿಸಲಾಗುತ್ತಿದ್ದು, ಕಂಬಳ ಜಿಲ್ಲಾ ಸಮಿತಿಯು ವಿಶೇಷ ಮಹಾಸಭೆ ಕರೆದು ಚರ್ಚಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ವರದಿಯಲ್ಲಿ ತಿಳಿಸಿದೆ. ಜತೆಗೆ ಸಮಿತಿಯ ಮುಂದಿನ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆಯನ್ನೂ ನಡೆಸುವುದಾಗಿ ತಿಳಿಸಿದೆ.
ಕಂಬಳಕ್ಕೆ ಇನ್ನಷ್ಟು ಶಕ್ತಿ ತುಂಬಿ ಕ್ರೀಡೆಯ ಮನ್ನಣೆ ನೀಡುವುದು, ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಸರಕಾರವು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ ಪಡೆದು ರಾಜ್ಯ ಕಂಬಳ ಅಸೋಸಿಯೇಶನ್ ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಸಹಕಾರ ಸಂಘಗಳ ಉಪನಿಬಂಧಕರಡಿ ಕಂಬಳ ರಾಜ್ಯ ಅಸೋಸಿಯೇಶನ್ ನೋಂದಣಿ ಮಾಡಲಾಗಿದೆ. ಇದಲ್ಲದೆ ರಾಷ್ಟ್ರೀಯ ಕ್ರೀಡಾ ಇಲಾಖೆ ಮಾನ್ಯತೆ ಪಡೆಯಲು ರಾಷ್ಟ್ರೀಯ ಕಂಬಳ ಫೆಡರೇಶನ್ ನೋಂದಣಿ ಮಾಡುವ ಪ್ರಯತ್ನವೂ ಚಾಲ್ತಿಯಲ್ಲಿದೆ.
ರಾಜ್ಯ ಕಂಬಳ ಸಮಿತಿಯು ಒಂದು ವರ್ಷದ ಲೆಕ್ಕಪತ್ರ ವರದಿ ಮಂಡಿಸಿದ್ದು, ಸರ್ವಾನುಮತದಿಂದ ಆಯ್ಕೆ ಮಾಡಿದ ಪದಾಧಿಕಾರಿಗಳ ಪಟ್ಟಿ, ಬೈಲಾ ಪ್ರತಿಯನ್ನೂ ಸಲ್ಲಿಸಲಾಗಿದೆ. ಇದರ ಪರಾಮರ್ಶೆ ಬಳಿಕ ಕ್ರೀಡಾ ಇಲಾಖೆಯಿಂದ ಮಾನ್ಯತೆ ದೊರಕುವ ನಿರೀಕ್ಷೆಯಲ್ಲಿದೆ.