ವೃತ್ತಿ ಬದುಕಿನ ಅದ್ಭುತ ಕ್ಷಣಗಳನ್ನು ಮೆಲುಕು ಹಾಕಿದ ಹಳೆಯ ವಿದ್ಯಾರ್ಥಿ ಗಣೇಶ್ ಕಾಸರಗೋಡು
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜು 2024-25 ನೇ ಶೈಕ್ಷಣಿಕ ವರ್ಷದ ‘ಕನ್ನಡ ಸಂಘ’ದ ಉದ್ಘಾಟನಾ ಕಾರ್ಯಕ್ರಮ ಡಿ. 18 ರಂದು ಬೆಳಗ್ಗೆ 10.30ಕ್ಕೆ ಕಾಲೇಜ್ ಸೆಮಿನಾರ್ ಹಾಲಿನಲ್ಲಿ ಜರಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ|ವಿ.ಎಸ್.ಅನಿಲ್ ಕುಮಾರ್ ವಹಿಸಿದರು.ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ‘ಸಂಭ್ರಮ’ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸ್ಯಾಂಡಲ್ ವುಡ್ ಚಿತ್ರರಂಗದ ಖ್ಯಾತ ಪತ್ರಕರ್ತರಾದ ಗಣೇಶ್ ಕಾಸರಗೋಡು ಹಾಗು ಕನ್ನಡ ಚಲನಚಿತ್ರ ನಿರ್ದೇಶಕರಾದ ಗಿರಿ ಕೃಷ್ಣ ಇವರು ಆಗಮಿಸಿದ್ದರು.ದೀಪ ಪ್ರಜ್ವಲನೆಯ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜ್ ಪ್ರಾಂಶುಪಾಲರು ನೆರವೇರಿಸಿದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಜಾತ.ಎಸ್ ಇವರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು.ನೂತನ ಕಾರ್ಯದರ್ಶಿಯಾಗಿ ವಿದ್ಯಾರ್ಥಿಗಳ ಬಹುಮತದೊಂದಿಗೆ ಆಯ್ಕೆಯಾದ ಕಿಶೋರ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಧನ್ಯವಾದವನ್ನು ಕೋರಿದರು. ಸರಕಾರಿ ಕಾಲೇಜು ಕಾಸರಗೋಡಿನ ಹಳೆ ವಿದ್ಯಾರ್ಥಿಯಾಗಿರುವ ಗಣೇಶ್ ಕಾಸರಗೋಡು ಅವರು 1977ರಲ್ಲಿ ಎಂ.ಎ ಪದವಿಯನ್ನು ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಡೆದಿದ್ದಾರೆ.ಸಿನಿಮಾ ಹಾಗು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಇವರು, ತಮ್ಮ ಕಾಲೇಜು ಕಾಲಘಟ್ಟದಿಂದ ಆರಂಭಿಸಿ ಇಂದಿನವರೆಗೆಗಿನ ಅನುಭವಗಳನ್ನು ಹಾಗು ಜೀವನದ ಪ್ರತಿಯೊಂದು ಅದ್ಭುತ ಕ್ಷಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರು. ಸಿನಿಮಾ ರಂಗದ ಹಲವಾರು ವಿಚಾರಗಳನ್ನು ಹಂಚಿ ಕ್ಷೇತ್ರದಲ್ಲಿ ಇರುವಂತಹ ಅವಕಾಶಗಳ ಕುರಿತಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಗಣೇಶ್ ಕಾಸರಗೋಡು ಇವರು ಬರೆದಂತಹ ಮೌನ ಮಾತಾದಾಗ, ಚದುರಿದ ಚಿತ್ರಗಳು,ಬಣ್ಣ ಮಾಸಿದ ಬದುಕು, ಶುಭಂ ಹಾಗು ಹಳೆಯ ಸಿನಿಮಾದ ಕೊನೆಯ ಫ್ರೇಮು ಎಂಬ ಪುಸ್ತಕಗಳನ್ನು ಕನ್ನಡ ವಿಭಾಗದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಹಾಗೆಯೇ ವಿದ್ಯಾರ್ಥಿಗಳಿಗೆ ಓದಿನ ಮಹತ್ವವನ್ನು ತಿಳಿಸಿದರು. ಕನ್ನಡ ವಿಭಾಗದ ನೂತನ ಕಾರ್ಯದರ್ಶಿಯಾದ ಕಿಶೋರ್ ಕುಮಾರ್ ಅವರು ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು. 2024-2025ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಉಪಾಧ್ಯಕ್ಷೆಯಾಗಿ ಜಸ್ನ ಅವರು ಕನ್ನಡ ವಿಭಾಗದ ಮುಂದಿನ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮಕ್ಕೆ ಅನಿರುದ್ಧ ಭಟ್ ಅವರು ಸ್ವಾಗತವನ್ನು ಕೋರಿದರು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ದೀಪ್ತಿ.ಎಂ ಅವರು ನಿರ್ವಹಿಸಿದರು.
ಈ ಕಾರ್ಯಕ್ರಮಕ್ಕೆ ಗಣೇಶ್ ಕಾಸಗೋಡು ಹಾಗು ಅವರ ಧರ್ಮಪತ್ನಿ ಗಾಯತ್ರಿ ಗಣೇಶ್, ಉದಯೋನ್ಮುಖ ಸಿನಿಮಾ ನಿರ್ದೇಶಕರಾದ ಗಿರಿ ಕೃಷ್ಣ ಅವರು ಆಗಮಿಸಿ ಕಾರ್ಯಾಕ್ರಮದ ಮೆರುಗನ್ನು ಹೆಚ್ಚಿಸಿದರು.ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಅಧ್ಯಾಪಕರಾದ ಡಾ ಬಾಲಕೃಷ್ಣ ಹೊಸಂಗಡಿ, ಡಾ ಶ್ರೀಧರ ಎನ್ , ಡಾ ಸವಿತಾ ಬಿ, ಡಾ ವೇದಾವತಿ ಎಸ್ , ಡಾ ಆಶಾಲತಾ ಸಿ ಕೆ ಮತ್ತು ಶ್ರೀಮತಿ ಲಕ್ಷ್ಮೀ ಅವರು ಉಪಸ್ಥಿತರಿದ್ದರು.