500 ವರ್ಷಗಳ ಹೋರಾಟದ ಬಳಿಕ ಕೊನೆಗೂ ಇದೇ ಜನವರಿ 22 ರಂದು ಅಯೋಧ್ಯಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿತು. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಮೂಲಕ ಹೊಸ ಇತಿಹಾಸ ಬರೆಯಲಾಯ್ತು. ಆರಂಭದಲ್ಲಿ ಶ್ರೀರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಬಂದ ಭಕ್ತಗಣವನ್ನು ಕಂಡು ಮುಂಬರುವ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗಲಿದೆ ಎಂದೇ ಊಹಿಸಲಾಗಿತ್ತು. ಆ ಊಹೆ ಈಗ ನಿಜವಾಗಿದೆ. ಪ್ರವಾಸಿಗರ ಭೇಟಿ ವಿಚಾರದಲ್ಲಿ ರಾಮಮಂದಿರ ವಿಶ್ವ ವಿಖ್ಯಾತ ತಾಜ್ಮಹಲ್ನ್ನೇ ಹಿಂದಿಕ್ಕಿದೆ.
ಹೌದು, ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ಅಗ್ರ ಸ್ಥಾನದಲ್ಲಿದ್ದ ತಾಜ್ ಮಹಲ್ನ್ನು ಹಿಂದಿಕ್ಕಿ ರಾಮಮಂದಿರ ನಂಬರ್ 1 ಪಟ್ಟಕ್ಕೇರಿದೆ. ಉತ್ತರ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಹೊಸ ದಾಖಲೆಯನ್ನು ಬರೆದಿದೆ. 2024ರ ಜನವರಿಯಿಂದ ಸೆಪ್ಟೆಂಬರ್ ನಡುವೆ 47.61 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಲ್ಲದೇ, 3,153 ವಿದೇಶಿ ಪ್ರವಾಸಿಗರೂ ರಾಮಮಂದಿರ ಕಣ್ತುಂಬಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಆಗ್ರಾದಲ್ಲಿ ತಾಜ್ಮಹಲ್ಗೆ 12.51 ಕೋಟಿ ಜನರು ಭೇಟಿ ನೀಡಿದ್ದಾರೆ. ಇನ್ನು11.59 ಕೋಟಿ ಮಂದಿ ದೇಶೀಯ ಮತ್ತು 9 ಲಕ್ಷದ 24 ಸಾವಿರ ಅಂತರರಾಷ್ಟ್ರೀಯ ಪ್ರವಾಸಿಗರು ವಿಸಿಟ್ ಕೊಟ್ಟಿದ್ದಾರೆ.
ಅಯೋಧ್ಯೆ ಮುಂದೊಂದು ದಿನ ಬಹುದೊಡ್ಡ ಧಾರ್ಮಿಕ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಹೇಳಿದ್ದಾರೆ. ಕಳೆದ ವರ್ಷ ಅಂದ್ರೆ 2023ರಲ್ಲಿ ಉತ್ತರಪ್ರದೇಶಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಒಟ್ಟು 48 ಕೋಟಿ. ಈ ವರ್ಷ ಕೇವಲ 9 ತಿಂಗಳಲ್ಲಿ ಅದರ ಹತ್ತಿರಕ್ಕೆ ಪ್ರವಾಸಿಗರು ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇದರ ಬಗ್ಗೆ ಮಾತನಾಡಿರುವ ಪ್ರವಾಸಗಳನ್ನು ಆಯೋಜನೆ ಮಾಡುವ ಮೋಹನ್ ಶರ್ಮಾ, ಅಯೋಧ್ಯೆ ಸದ್ಯ ಧಾರ್ಮಿಕ ಪ್ರವಾಸದ ಎಪಿಕ್ ಸೆಂಟರ್ ಆಗಿದೆ. ಇದು ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಹೇಳಿದ್ದಾರೆ. ಈಗಾಗಲೇ ನಮ್ಮಲ್ಲಿ ಈಗಾಗಲೇ ಶೇಕಡಾ 70 ರಷ್ಟು ಪ್ರವಾಸಿಗರು ಅಯೋಧ್ಯೆಗಾಗಿ ಬುಕ್ಕಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.