ಬೆಂಗಳೂರು: ಹೈಡ್ರೋಜನ್ ಚಾಲಿತ, ಬಿಎಸ್–6 ಎರಡನೆಯ ಹಂತದ ಮಾನದಂಡವನ್ನು ಒಳಗೊಂಡಿರುವ ಟ್ರಕ್ ಅನ್ನು ಬಾಷ್ ಲಿಮಿಟೆಡ್ ಮುಂದಿನ ವರ್ಷದ ಆರಂಭದಲ್ಲಿ ಗ್ರಾಹಕರ ಮುಂದೆ ತರಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಮುದ್ಲಾಪುರ ತಿಳಿಸಿದರು.
ಕಂಪನಿಯ ಬೆಂಗಳೂರಿನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೈಡ್ರೋಜನ್ ಚಾಲಿತ ಟ್ರಕ್ ಗಳು ಮುಂದಿನ ದಿನಗಳಲ್ಲಿ ಹೆಚ್ಚು ಸೀಕಾರಾರ್ಹವಾಗುವ ನಿರೀಕ್ಷೆ ಇದೆ. 2030ರ ವೇಳೆಗೆ ದೇಶದ ಒಟ್ಟು ಟ್ರಕ್‌ಗಳಲ್ಲಿ ಹೈಡ್ರೋಜನ್ ಚಾಲಿತ ಟ್ರಕ್ ಗಳ ಪಾಲು ಶೇಕಡ 10ರಷ್ಟು ಆಗುವ ಸಾಧ್ಯತೆ ಇದೆ’ ಎಂದು ಹೇಳಿದರು.
ಕಂಪನಿಯ ಜೂನ್ ತ್ರೈಮಾಸಿಕದ ಹಣಕಾಸಿನ ಸಾಧನೆ ಕುರಿತು ವಿವರ ನೀಡಿದ ಅವರು, ‘ಕಂಪನಿಯ ತೆರಿಗೆ ನಂತರದ ಲಾಭವು ₹409 ಕೋಟಿ ಆಗಿದೆ. ಕಂಪನಿಯ ಕಾರ್ಯಾಚರಣೆ ವರಮಾನವು ₹4,158 ಕೋಟಿ ಆಗಿದ್ದು, ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 17.3ರಷ್ಟು ಹೆಚ್ಚು’ ಎಂದು ತಿಳಿಸಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಪನಿಯು ತನ್ನ ಉತ್ಪನ್ನಗಳ ಮಾರಾಟವು ಶೇಕಡ 15ರಷ್ಟು ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ಹೊಂದಿದೆ.