ಚಪಾತಿ ರೌಂಡ್‌ ಶೇಪ್‌ನಲ್ಲಿದೆಯೇ ಎಂದು ಪರೀಕ್ಷಿಸಲು ಎಐ ಟೂಲ್‌ ಅಭಿವೃದ್ಧಿಪಡಿಸಿದ ಬೆಂಗಳೂರಿನ ಟೆಕ್ಕಿ

Share with

ಹೇಳಿ ಕೇಳಿ ಇದು ತಂತ್ರಜ್ಞಾನದ ಯುಗ. ನಾವೆಲ್ಲರೂ ಈಗ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿಕೊಂಡಿರುವ ಕೃತಕ ಬುದ್ಧಿಮತ್ತೆ ನಮ್ಮ ಜೀವನದ ಭಾಗವಾಗಿಯೂ ಹೋಗಿದೆ. ವಿಶೇಷ ಏನಪ್ಪಾ ಅಂದ್ರೆ ಇದೀಗ ಚಪಾತಿ, ರೊಟ್ಟಿ ರೌಂಡ್‌ ಶೇಪ್‌ನಲ್ಲಿದೆಯೇ ಎಂಬುದನ್ನು ಪರೀಕ್ಷಿಸಲು ಕೂಡಾ ಎಐ ಟೂಲ್‌ ಬಂದಿದೆ. ಹೌದು, ಇದೀಗ ಐಐಟಿ ಪದವೀಧರರೊಬ್ಬರು ರೊಟ್ಟಿ ಹಾಗೂ ಚಪಾತಿ ಗುಂಡಾಗಿದೆಯೇ ಎಂದು ಪರೀಕ್ಷಿಸಲು ಎಐ ಟೂಲ್‌ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇವರು rotichecker.ai ಎಂಬ ಟೂಲ್‌ನ್ನು ಅಭಿವೃದ್ಧಿಪಡಿಸಿದ್ದು, ಈ ಸಾಧನದ ಮೂಲಕ ನೀವು ಮಾಡಿದ ರೊಟ್ಟಿ ಅಥವಾ ಚಪಾತಿ ಎಷ್ಟು ಗುಂಡಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡಬಹುದಾಗಿದೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಬೆಂಗಳೂರಿನ ಟೆಕ್ಕಿ ಹಾಗೂ ಐಐಟಿ ಖರಗ್‌ಪುರದ ಹಳೆಯ ವಿದ್ಯಾರ್ಥಿ ಅನಿಮೇಶ್ ಚೌಹಾಣ್ ಚಪಾತಿಯ ದುಂಡುತನವನ್ನು ರೇಟ್‌ ಮಾಡುವ ಅದ್ಭುತವಾದ ಎಐ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಈ AI ಉಪಕರಣವು ಮೊದಲು ರೊಟ್ಟಿ ಅಥವಾ ಚಪಾತಿಯ ರೌಂಡ್‌ ಶೇಪ್‌ನ್ನು ಸ್ಕ್ಯಾನ್ ಮಾಡುತ್ತದೆ, ನಂತರ ಅದಕ್ಕೆ 100 ಕ್ಕೆ ಇಂತಿಷ್ಟು ಅಂಕವನ್ನು ನೀಡುತ್ತದೆ.

ಅನಿಮೇಶ್ ಚೌಹಾಣ್‌ ತಮ್ಮ ಬಿಡುವಿನ ವೇಳೆಯಲ್ಲಿ ಕೇವಲ ಮೋಜಿಗಾಗಿ ಈ ಟೂಲ್‌ ಅಭಿವೃದ್ಧಿಡಿಸಿದ್ದು, ಇದೀಗ ಈ ಎಐ ಪರಿಕರದ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಕುತೂಹಲಕಾರಿ ವಿಷಯವೆಂದರೆ ಇದಕ್ಕೆ ಹೂಡಿಕೆದಾರರ ಬಗ್ಗೆಯೂ ಚರ್ಚೆಗಳು ಪ್ರಾರಂಭವಾಗಿವೆ.

ಜನವರಿ 31 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 4.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಚೀನಾ ಡೀಪ್‌ಸೀಕ್‌ ಅಭಿವೃದ್ಧಿಪಡಿಸಿದರೆ, ನಮ್ಮ ದೇಶದ ಡೆವಲಪರ್ಸ್‌ಗಳು ಇಂತಹ ಕೆಲಸಕ್ಕೆ ಬಾರದ ಟೂಲ್‌ಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ನಿರತರಾಗಿದ್ದಾರೆʼ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ಇಂಟರೆಸ್ಟಿಂಗ್‌ ಆಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *