ಮಂಗಳೂರು: ಮಗನ ಸಾವಿನಿಂದ ಮನನೊಂದು ಸಮುದ್ರಕ್ಕೆ ಹಾರಿ ಮೃತಪಟ್ಟ ಕಾಸರಗೋಡು ಜಿಲ್ಲೆಯ ಕುಂಬಳೆ ಬಂಬ್ರಾಣ ನಿವಾಸಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಸಾವಿಗೆ ಪತ್ನಿಯ ಅನೈತಿಕ ಸಂಬಂಧ ಪ್ರಕರಣವೇ ಕಾರಣ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಮೃತ ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ದೂರು ನೀಡಿರುವುದು ಮತ್ತು ಇವರ ಅಣ್ಣ ಸುಧಾಕರ ಉಳ್ಳಾಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಂಬಳೆಯ ಬಂಬ್ರಾಣ ನಿವಾಸಿಯಾಗಿದ್ದ ಲೋಕೇಶ್ ತನ್ನ ಪತ್ನಿ ಪ್ರಭಾವತಿ ಮತ್ತು ಆಕೆಯ ಪ್ರಿಯಕರ ಎನ್ನಲಾದ ಸಂದೀಪ್ ಆರಿಕ್ಕಾಡಿ ಎಂಬಾತನ ವಿರುದ್ಧ ಕಾಸರಗೋಡು ಎಸ್ಪಿ ಕಚೇರಿಗೆ ಆಗಸ್ಟ್ 11ರಂದು ದೂರು ನೀಡಿದ್ದಾರೆ. ತನ್ನ ಮಗ ರಾಜೇಶ್ ಸಾವಿಗೆ ಇವರ ಅಕ್ರಮ ಸಂಬಂಧ ಮತ್ತು ಅದರ ವಿಚಾರದಲ್ಲಿ ನಡೆದಿದ್ದ ಗಲಾಟೆಯೇ ಕಾರಣ. ತಾಯಿ ಜೊತೆಗೆ ಸಂದೀಪ್ ಅಕ್ರಮ ಸಂಬಂಧ ಹೊಂದಿರುವುದನ್ನು ರಾಜೇಶ್ ಆಕ್ಷೇಪಿಸಿದ್ದು, ಅದಕ್ಕೆ ಪ್ರತಿಯಾಗಿ ಸಂದೀಪ್ ಬೆದರಿಕೆ ಹಾಕಿದ್ದ. ಇದರಿಂದ ನೊಂದು ರಾಜೇಶ್ ಉಳ್ಳಾಲಕ್ಕೆ ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿದ್ದ. ಈ ಬಗ್ಗೆ ಪ್ರಭಾವತಿ ಮತ್ತು ಆಕೆಯ ತಂಗಿ ಬೇಬಿ ಹಾಗೂ ಪ್ರಿಯಕರ ಸಂದೀಪ್ ಆರಿಕ್ಕಾಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ಕಾಸರಗೋಡು ಕಚೇರಿಗೆ ನೀಡಿದ್ದ ದೂರಿನಲ್ಲಿ ಒತ್ತಾಯಿಸಿದ್ದರು.
ಜುಲೈ 10ರಂದು ಲೋಕೇಶ್(51) ಅವರ ಮಗ ರಾಜೇಶ್(26) ಉಳ್ಳಾಲ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶವದ ಮರಣೋತ್ತರ ಪರೀಕ್ಷೆ ಅಂತ್ಯಕ್ರಿಯೆ ಬಳಿಕ ಪ್ರಭಾವತಿ ಗಂಡನ ಮನೆ ತೊರೆದು ತನ್ನ ತಂಗಿಯ ಮನೆಯಲ್ಲಿ ಸೇರಿದ್ದರೆ, ಇತ್ತ ಲೋಕೇಶ್ ತನ್ನ ಸೋದರ ಸುಧಾಕರ್ ಅವರ ತೊಕ್ಕೊಟ್ಟಿನ ಮನೆಯಲ್ಲಿ ವಾಸ ಮಾಡಲಾರಂಭಿಸಿದ್ದರು. ತನ್ನ ಮಗನ ಸಾವಿನಿಂದ ತೀವ್ರ ನೊಂದುಕೊಂಡಿದ್ದ ಲೋಕೇಶ್, ತನ್ನ ಗೆಳೆಯರಿಗೆ ಪತ್ನಿಯ ಕಿರುಕುಳ, ಕೆಟ್ಟ ನಡತೆಯ ಬಗ್ಗೆ ಹೇಳಿಕೊಂಡಿದ್ದರು. ಆಗಸ್ಟ್ 14ರಂದು ಇಷ್ಟೆಲ್ಲ ಆದಮೇಲೆ ಅಂತಹ ಪತ್ನಿಯೊಂದಿಗೆ ವಾಸ ಮಾಡಲು ಸಾಧ್ಯವಾಗದು. ಆಕೆಯ ಮುಖವನ್ನೂ ನೋಡುವುದಿಲ್ಲ. ನನ್ನ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಸಿಗಬಹುದು ಎಂದು ತನ್ನ ಗೆಳೆಯರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಫೋನನ್ನು ಸೋದರನ ತೊಕ್ಕೊಟ್ಟಿನ ಮನೆಯಲ್ಲಿಟ್ಟು ತೆರಳಿದ್ದರು. ವಾಯ್ಸ್ ಕೇಳಿದ ಗೆಳೆಯರು ಕೂಡಲೇ ಫೋನ್ ಮಾಡಿದ್ದು, ಫೋನನ್ನು ಮನೆಯಲ್ಲಿ ಬಿಟ್ಟು ಲೋಕೇಶ್ ತೆರಳಿರುವುದು ಗೊತ್ತಾಗಿತ್ತು.
ಇತ್ತ ಗೆಳೆಯರು ಮತ್ತು ಸೋದರ ಉಳ್ಳಾಲದಲ್ಲಿ ಹುಡುಕಾಡುತ್ತಿದ್ದಂತೆ, ಅದೇ ದಿನವೇ ಲೋಕೇಶ್ ಮೃತದೇಹ ಉಳ್ಳಾಲ ಸಮುದ್ರದಲ್ಲಿ ಪತ್ತೆಯಾಗಿತ್ತು. ಮೃತರ ಸೋದರ ಸುಧಾಕರ ಮತ್ತು ಲೋಕೇಶ್ ಅವರ ಇನ್ನೊಬ್ಬ ಮಗ ಶುಭಂ ತಂದೆಯದ್ದೇ ಶವ ಎಂದು ಗುರುತಿಸಿದ್ದಾರೆ. ಸುಧಾಕರ ಅವರು ಉಳ್ಳಾಲ ಠಾಣೆಗೆ ನೀಡಿರುವ ದೂರಿನಲ್ಲಿ ಪ್ರಭಾವತಿ, ಸಂದೀಪ್ ಆರಿಕ್ಕಾಡಿ, ಶುಭಂ, ಬೇಬಿ ಎಂಬವರ ಹೆಸರನ್ನು ಉಲ್ಲೇಖಿಸಿದ್ದು ಇವರ ಚಿತಾವಣೆಯಿಂದಲೇ ನನ್ನ ತಮ್ಮ ಲೋಕೇಶ್ ಸಾವಿಗೆ ಶರಣಾಗಿದ್ದಾರೆಂದು ತಿಳಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ.