ಒಂದೆಡೆ ಧರ್ಮಸ್ಥಳದ ನೇರ್ತನೆಯಲ್ಲಿ ಕಾಡಾನೆಗಳು ಹಾವಳಿ ಮುಂದುವರಿಸಿದ್ದು ಇತ್ತ ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಎಂಬಲ್ಲಿ ಗುರುವಾರ ತಡರಾತ್ರಿ ಕಾಡಾನೆಗಳ ಹಿಂಡು ರಾಘವೇಂದ್ರ ಭಟ್ ಪಟವರ್ಧನ್ ಅವರ ತೋಟಕ್ಕೆ ದಾಳಿ ಇಟ್ಟಿದ್ದು 55 ಅಡಕೆ ಮರ ಹಾಗೂ ಮೂರು ತೆಂಗಿನ ಮರಗಳನ್ನು ಧ್ವಂಸಗೈದಿವೆ. ಸಮೀಪದ ರಾಮಂದೊಟ್ಟು ಕೆಂಪಯ್ಯ ಗೌಡ ಎಂಬವರ ಭತ್ತದ ಗದ್ದೆಗು ನುಗ್ಗಿದ ಕಾಡಾನೆಗಳ ಹಿಂಡು ಸುಮಾರು ಮುಕ್ಕಾಲು ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆಗೆ ಸಂಪೂರ್ಣ ಹಾನಿ ಉಂಟುಮಾಡಿದೆ.
ರಾತ್ರಿ 11:30 ಸುಮಾರಿಗೆ ಕಾಡಾನೆಗಳು ತೋಟಕ್ಕೆ ನುಗ್ಗಿರುವ ವಿಚಾರ ತಿಳಿದುಬಂದಿದ್ದು ಪರಿಸರದವರು ಸೇರಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಿದರು. ಪಟಾಕಿ ಸದ್ದಿಗೆ ಜಗ್ಗದ ಕಾಡಾನೆಗಳು ಕೃಷಿಹಾನಿಯನ್ನು ಮುಂದುವರಿಸಿದವು. ಹಿಂಡಿನಲ್ಲಿ ಒಂದು ಮರಿಯಾನೆ ಸಹಿತ 5 ಕಾಡಾನೆಗಳು ಇದ್ದ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಕೃಷಿಹಾನಿ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ಗುಂಪು
ಕಳೆದ ವಾರ ಚಾರ್ಮಾಡಿ ಪರಿಸರದಲ್ಲಿ ಎರಡು ಮರಿಯಾನೆ ಸಹಿತ 8ರಿಂದ 10 ಕಾಡಾನೆಗಳು ಸಂಚಾರ ನಡೆಸಿರುವುದು ಕಂಡುಬಂದ ಕುರಿತು ಅಲ್ಲಿನ ನಾಗರಿಕರು ತಿಳಿಸಿದ್ದರು.ಒಂದು ಮರಿಯಾನೆ ಸಹಿತ ಮೂರು ಆನೆಗಳು ಧರ್ಮಸ್ಥಳದ ನೇರ್ತನೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕೃಷಿಹಾನಿ ಉಂಟು ಮಾಡುತ್ತಾ ಅಲ್ಲಿನ ಜನವಸತಿ ಪ್ರದೇಶದಲ್ಲೂ ಕಂಡು ಬರುತ್ತಿವೆ.
ಇದೀಗ ಕಡಿರುದ್ಯಾವರ ಭಾಗದಲ್ಲಿ ಒಂದು ಮರಿಯಾನೆ ಸಹಿತ 5 ಕಾಡಾನೆಗಳು ಕಂಡುಬಂದಿವೆ. ಇದರಿಂದ ಕಾಡಾನೆಗಳ ಹಿಂಡು,ಎರಡು ಗುಂಪಾಗಿ ಬೇರ್ಪಟ್ಟು ಕೃಷಿಹಾನಿ ಉಂಟು ಮಾಡುತ್ತಾ ತಿರುಗಾಟ ನಡೆಸುತ್ತಿರುವ ಕುರಿತು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.