ಬದಿಯಡ್ಕ: ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕರ 65ನೇ ಜನ್ಮ ದಿನಾಚರಣೆಯ ಅಂಗವಾಗಿ ಫೋಕಸ್ ಡಿಜಿಟಲ್ ಮೀಡಿಯ ನಿರ್ಮಿಸಿದ “ದೃಶ್ಯ” ಎಂಬ ಸಾಕ್ಷ್ಯಚಿತ್ರವನ್ನು ಎಡನೀರು ಮಠಾಧೀಶರಾದ ಶ್ರೀಶ್ರೀ ಸಚ್ಚಿದಾನಂದ ಶ್ರೀಪಾದಂಗಳವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕವಿ ರಾಧಾಕೃಷ್ಣ ಉಳಿಯತ್ತಡ್ಕ, ನಿವೃತ್ರ ಗ್ರಾಮಾಧಿಕಾರಿ ಕೃಷ್ಣ ಡಿ.ದರ್ಬೆತ್ತಡ್ಕ, ಬದಿಯಡ್ಕ ಗ್ರಾ.ಪಂ.ಮಾಜಿ ಸದಸ್ಯ ಗಂಗಾಧರ ಗೋಳಿಯಡ್ಕ, ಸಮತಾ ಸಾಹಿತ್ಯ ವೇದಿಕೆಯ ಬಾಲಕೃಷ್ಣ ಬೇರಿಕೆ, ಸುಂದರ ಬಾರಡ್ಕ, ವನಜಾಕ್ಚಿ ಚಂಬ್ರಕಾನ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಸಾಕ್ಷ್ಯಚಿತ್ರದ ನಿರ್ದೇಶಕ ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು. ಕವಿಯಾಗಿ, ಪತ್ರಕರ್ತರಾಗಿ, ಸಂಘಟಕರಾಗಿ ಸಾಮಾನ್ಯ ಸ್ತರದಿಂದ ಅಸಾಮಾನ್ಯ ಸಾಧನೆಗಳ ಶಿಖರವೇರಿದ ರಾಧಾಕೃಷ್ಣ ಉಳಿಯತ್ತಡ್ಕ ಅವರ ಬದುಕು ಬರಹದ ಸಾಕ್ಷ್ಯಚಿತ್ರವನ್ನು ಜಯ ಮಣಿಯಂಪಾರೆ ಅವರ ಪರಿಕಲ್ಪನೆಯಲ್ಲಿ ಸಿನಿ ಛಾಯಾ ನಿರ್ದೇಶಕ ಮೋಹನ್ ಪಡ್ರೆ ಸೆರೆ ಹಿಡಿದಿದ್ದಾರೆ.
ಗುರುರಾಜ್ ಎಂ.ಬಿ. ಹಿನ್ನಲೆ ಧ್ವನಿ ನೀಡಿದ್ದಾರೆ. ಡಾ.ಯು ಮಹೇಶ್ವರಿ, ಡಾ.ರತ್ನಾಕರ ಮಲ್ಲಮೂಲೆ, ಪ್ರಸನ್ನ ರೈ, ದಿವ್ಯಾ ಗಟ್ಟಿ ಪರಕ್ಕಿಲ, ಮೊದಲಾವರು ರಾಧಾಕೃಷ್ಣ ಉಳಿಯತ್ತಡ್ಕರ ಬದುಕನ್ನು ಈ ಸಾಕ್ಷ್ಯ ಚಿತ್ರದ ಮೂಲಕ ಅನಾವರಣಗೊಳಿಸಿದ್ದಾರೆ.