ಮಂಗಳೂರು: ಮಂಗಳೂರು ನಗರದ ನಂತೂರು ಜಂಕ್ಷನ್ನಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯನ್ನು ಉಂಟು ಮಾಡುತ್ತಿದ್ದ ಗುಂಡಿಗಳನ್ನು ಪೊಲೀಸರೇ ಮುಚ್ಚುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಈಶ್ವರ ಸ್ವಾಮಿ ಹಾಗೂ ಎಎಸ್ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿ ಹಿಡಿದು ಈ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ.
ನಗರ ರಸ್ತೆಗಳೊಂದಿಗೆ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಕೂಡ ಇಲ್ಲಿ ಹಾದು ಹೋಗುವುದರಿಂದ ಸಂಚಾರ ವ್ಯವಸ್ಥೆಗೆ ಭಾರಿ ತೊಂದರೆ ಉಂಟಾಗುತ್ತಿದ್ದು, ಪೊಲೀಸ್ ಸಿಬ್ಬಂದಿ ಕೂಡ ಜೀವ ಕೈಯಲ್ಲಿ ಹಿಡಿದೇ ಕರ್ತವ್ಯವನ್ನು ನಿರ್ವಹಿಸಬೇಕಿತ್ತು.
ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇಲ್ಲಿ ದಿನಾಲೂ ಟ್ರಾಫಿಕ್ ಉಂಟಾಗುತ್ತಿದ್ದು, ಸ್ವತಃ ಪೊಲೀಸ್ ಅಧಿಕಾರಿಗಳಾದ ಈಶ್ವರ ಸ್ವಾಮಿ ಹಾಗೂ ವಿಶ್ವನಾಥ ರೈ ಅವರು ಕಾಂಕ್ರೀಟ್ ತರಿಸಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.