ಮಂಗಳೂರು: ಯುವಕರ ತಂಡವೊಂದು ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಣ್ಣೂರು ಎಂಬಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ವೇಳೆ ಕಣ್ಣೂರು ಬಳಿ ಬಸ್ ನಿಲ್ಲಿಸದ ಕಾರಣಕ್ಕಾಗಿ ಎಸ್.ಕೆ ಟ್ರಾವೆಲ್ ಹೆಸರಿನ ಬಸ್ ನಿರ್ವಾಹಕ ಯಶವಂತ್ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಯಶವಂತ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮಯದ ಅಭಾವದಿಂದ ಕಣ್ಣೂರು ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಚಾಲಕನ ವಿರುದ್ದ ಬಸ್ಸಿನಲ್ಲಿದ್ದ ಪ್ರಯಾಣಿಕ ಒಬ್ಬನಿಂದ ಹಲ್ಲೆ ನಡೆಸಲಾಗಿದ್ದು ಆ ಬಳಿಕ ಮತ್ತೆ ಹತ್ತಾರು ಜನ ಸೇರಿ ನಿರ್ವಾಹಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಎರಡೂ ಕಡೆಯವರಿಂದ ಕಂಕನಾಡಿ ನಗರ ಠಾಣೆಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಬುಧವಾರ ಬಸ್ ಬಂದ್ ಮಾಡಲಾಗಿದ್ದು ಅಡ್ಯಾರ್, ಕಣ್ಣೂರು ಭಾಗದ ಸಿಟಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಅಡ್ಯಾರ್ ಕಟ್ಟೆ ಭಾಗದಲ್ಲಿ ಜಮಾಯಿಸಿದ ಬಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಅಡ್ಯಾರ್ ಕಟ್ಟೆ ಬಳಿ ಎಸಿಪಿ ನೇತೃತ್ವದಲ್ಲಿ ಬಿಗು ಪೊಲೀಸ್ ಭದ್ರತೆಯನ್ನು ನೀಡಲಾಗಿದ್ದು, ಸದ್ಯ ಗುಂಪು ಚದುರಿಸಿ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸಿದ್ದಾರೆ.