ಬೆಳ್ತಂಗಡಿ: ಪಶುಗಳ ಸೇವೆಗಾಗಿ ರಾಜ್ಯಾದ್ಯಂತ ಪಶುಸಖಿಯರನ್ನು ನೇಮಿಸಿದ್ದು ಇದು ಜವಾಬ್ದಾರಿಯುತ ಸೇವೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು. ಅವರು ಬೆಳ್ತಂಗಡಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಸಖಿಯವರಿಗಾಗಿ ಇರುವ ಕಿಟ್ ವಿತರಣೆ ಕಾರ್ಯಕ್ರಮವನ್ನು ಸೆ.30 ರಂದು ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕೊಂದರಲ್ಲೇ ಶೇ.50 ರಷ್ಟು ಹಾಲು ಉತ್ಪಾದನೆಯಾಗುತ್ತಿದೆ. ಕೃಷಿಕರಿಗೆ ವರದಾನವಾಗುವ ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೆ 5900 ಮಂದಿ ಪಶು ಸಖಿಯರನ್ನು ನೇಮಿಸಿ ಮಾಸಿಕ 3000 ರೂ. ಸಂಭಾವನೆ ಜತೆಗೆ ಮಾಸಿಕ 720 ಭತ್ಯೆ ನೀಡುತ್ತಿದೆ. ಈ ಮೂಲಕ ಪಶುಸಂಗೋಪನೆಯನ್ನು ಪೂಜ್ಯ ಭಾವದಿಂದ ನಿರ್ವಹಿಸಿ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು, ಗೋಪಾಲನೆ ಎಂಬವುದು ಪವಿತ್ರ ಮತ್ತು ಮಹತ್ತರವಾದ ಜವಾಬ್ದಾರಿಗಳಲ್ಲಿ ಒಂದಾಗಿದೆ. ತಾಲೂಕಿನಲ್ಲಿ ಹೆಚ್ಚಿನ ಮನೆಗಳಲ್ಲಿ ಬಹುತೇಕ ಹಸುಗಳಿವೆ. ಹೀಗಾಗಿ ಹಾಲಿನ ಉತ್ಪನ್ನ ಯಥೇಚ್ಛವಾಗಿದೆ. ಪಶು ಸಖಿಯರು ಸರಕಾರದ ಯೋಜನೆ ಯಶಸ್ವಿಗೊಳ್ಳಲಿ ಎಂದರು.
ಮಂಗಳೂರು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ|ಅರುಣ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ, ಬೆಳ್ತಂಗಡಿ ಪಶು ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ| ರವಿಕುಮಾರ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ (ಆಡಳಿತ) ಡಾ|ಮಂಜನಾಯ್ಕ್ ವಂದಿಸಿದರು. ಅಭಿವೃದ್ಧಿ ಅಧಿಕಾರಿ ಡಾ|ಜಯಕೀರ್ತಿ ಜೈನ್ ನಿರೂಪಿಸಿದರು. ಎನ್.ಆರ್.ಎಲ್.ಎಂ.ನ ತಾಲೂಕು ಯೋಜನಾ ವ್ಯವಸ್ಥಾಪಕಿ ಪ್ರತಿಮಾ, ಡಾ|ಯತೀಶ್, ಡಾ|ವಿನಯ್ ಉಪಸ್ಥಿತರಿದ್ದರು.