ತಿರುವನಂತಪುರ: ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಕ್ಯಾಥೋಲಿಕ್ ಪಾದ್ರಿಯೊಬ್ಬರನ್ನು ಚರ್ಚ್ನ ವಿಕಾರ್ ಹುದ್ದೆಯಿಂದ ಅಮಾನತು ಗೊಳಿಸಿರುವ ಘಟನೆ ಇಡುಕ್ಕಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಫಾ.ಕುರಿಯಕೋಸೆ ಮಟ್ಟಂ ಅವರು ಅ.2ರಂದು ಇಡುಕ್ಕಿಯ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ಅಜಿ ಅವರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದರು. ಈ ವಿಷಯ ತಿಳಿದ ಕ್ಯಾಥೋಲಿಕ್ ಧರ್ಮಪ್ರಾಂತ್ಯವು ಫಾ.ಕುರಿಯಕೋಸೆ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ಪಿಟಿಐ ವರದಿ ವಿವರಿಸಿದೆ.
ಆದಿಮಲಿ ಸಮೀಪದ ಮಂಕುವಾ ಸೈಂಟ್ ಥಾಮಸ್ ಚರ್ಚ್ನಲ್ಲಿ ಫಾದರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಫಾ.ಕುರಿಯಕೋಸೆ ಮಟ್ಟಂ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್ ತಿಳಿಸಿದೆ.
ಚರ್ಚ್ ನ ಪಾದ್ರಿಯಾದವರು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಾಗಲಿ ಅಥವಾ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ ಕ್ಯಾನೊನ್ ಕಾನೂನು ಪ್ರಕಾರ ಫಾದರ್ ಕುರಿಯಕೋಸೆ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
“ನಾನು ಪ್ರಚಲಿತ ವಿಷಯಗಳನ್ನು ಗಮನಿಸುತ್ತಿದ್ದೇನೆ. ಹಾಗಾಗಿ ಭಾರತೀಯ ಜನತಾ ಪಕ್ಷ ಸೇರದಿರಲು ನನಗೆ ಯಾವ ಕಾರಣವೂ ಸಿಕ್ಕಿಲ್ಲ. ನನಗೆ ಬಿಜೆಪಿಯಲ್ಲಿ ಹಲವಾರು ಮಂದಿ ಗೆಳೆಯರಿದ್ದಾರೆ. ಈಗ ನಾನು ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದೇನೆ ಎಂದು ಫಾ.ಕುರಿಯಕೋಸೆ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.