ಬಂಟ್ವಾಳ: ಕಾರೊಂದು ಚಾಲಕನ ಅಜಾಗರೂಕತೆಯಿಂದ ಬೈಕ್ ಸವಾರನಿಗೆ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ.ಸಿ ರೋಡಿನ ಕೈಕಂಬ ತಲಪಾಡಿ ಎಂಬಲ್ಲಿ ಅ.2ರಂದು ರಾತ್ರಿ ನಡೆದಿದೆ.
ಬೈಕ್ ಸವಾರ ಶಿವಪ್ರಸಾದ್ ಗಾಯಗೊಂಡವರಾಗಿದ್ದು, ಶಿವಪ್ರಸಾದ್ ಮತ್ತು ಸಹ ಸವಾರ ತಿಲಕ್ ಪ್ರಸಾದ್ ಅವರು ಬಿ.ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರು ಬಿ.ಸಿ ರೋಡು ತಲಪಾಡಿ ಕೆ.ಎಸ್.ಆರ್.ಟಿ.ಸಿ ಡಿಪೋ ಎದುರುಗಡೆ ಡಿಕ್ಕಿ ಹೊಡೆದಿದೆ.
ಕಾರಿನ ಚಾಲಕ ಜಾಕೀರ್ ಹುಸೈನ್ ಅವರು ಅಜಾಗರೂಕತೆಯಿಂದ ಬಲಬದಿ ಅಂದರೆ ಮತ್ತೆ ವಾಪಸು ಬಿ.ಸಿ ರೋಡು ಕಡೆಗೆ ಹೋಗುವ ಉದ್ದೇಶದಿಂದ ತಲಪಾಡಿ ಡಿವೈಡರ್ ನಲ್ಲಿ ಬಲಬದಿಗೆ ತಿರುಗಿಸಿದಾಗ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆಗೆ ಪಲ್ಟಿಯಾಗಿದೆ.
ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ಸಂಚಾರಿ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.