ಬ್ರಹ್ಮಾವರ: ಕ್ಷುಲ್ಲಕ ಕಾರಣಕ್ಕಾಗಿ ಮಗ ತನ್ನ ತಂದೆಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ದಾರುಣ ಘಟನೆ ಪೆಜಮಂಗೂರು ಗ್ರಾಮದ ಮೊಗವೀರ ಪೇಟೆ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕೊಲೆಗೀಡಾದವರನ್ನು ಮೊಗವೀರಪೇಟೆ ನಿವಾಸಿ ಸಾಧು ಮರಕಾಲ(68) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯಾದ ಮೃತರ ಪುತ್ರ ಆನಂದ ಮರಕಾಲ (50) ಎಂಬಾತ ತಲೆಮರೆಸಿಕೊಂಡಿದ್ದಾನೆ.
ಶನಿವಾರದಂದು ಮನೆಗೆ ಆಗಮಿಸಿದ ಮಗ ಆನಂದ, ತಂದೆ ಜೊತೆ ಗಲಾಟೆ ಮಾಡಿದ್ದನು. ಈ ವೇಳೆ ಸಿಟ್ಟಿಗೆದ್ದ ಆನಂದ, ಕತ್ತಿಯಿಂದ ತಂದೆಯ ಕಾಲಿನ ಭಾಗ ಕಡಿದು ಪರಾರಿಯಾಗಿದ್ದನು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸಾಧು ಮರಕಾಲ, ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ, ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.