ಬಂಟ್ವಾಳ:ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಕಲಾರಂಗದ ಮುಕುಟಮಣಿ ದಿವಂಗತ ಶಾಂತಾರಂ ಕಲ್ಲಡ್ಕ ಹೆಸರಿನಲ್ಲಿ ನೀಡುವ ಪ್ರತಿಷ್ಠಿತ ಶಾಂತಶ್ರೀ ಪ್ರಶಸ್ತಿಗೆ ಸಂಪ್ರದಾಯಬದ್ದ ದೈವನರ್ತಕರಾದ ರುಕ್ಮಯ ನಲಿಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ಸವದ ಸಮಯ ಊರಿನಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಗ್ರಾಮ ಗೌರವ ನೀಡಲಾಗುವುದು. ಈ ಬಾರಿಯ ಗ್ರಾಮ ಗೌರವ ಪುರಸ್ಕಾರಕ್ಕೆ 31 ಬಾರಿ ರಕ್ತದಾನ ಮಾಡಿದ ಕುಶಲ ಚೆಂಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀ ಶಾರದ ಸೇವಾ ಪ್ರತಿಷ್ಠಾನ ಕಲ್ಲಡ್ಕ ಆಶ್ರಯದಲ್ಲಿ ಜರುಗುವ 46ನೇ ವರ್ಷದ ಶ್ರಿ ಶಾರದ ಪೂಜಾ ಮಹೋತ್ಸವದ ಮೂರನೇ ದಿನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳ ಸಮಕ್ಷಮದಲ್ಲಿ ಈ ಪ್ರಶಸ್ತಿ ಮತ್ತು ಗ್ರಾಮಗೌರವವನ್ನು ಪ್ರಧಾನ ಮಾಡಲಾಗುವುದೆಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.