ಮಂಗಳೂರು: ಭಾರತೀಯ ರೈಲ್ವೆ ಇಲಾಖೆಯು ಮಡಗಾಂವ್-ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಗೊಳಿಸಿ ಆದೇಶ ಹೊರಡಿಸಿದ್ದು, ಈ ಬಗ್ಗೆ ನಡೆದ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ.
ಬೈಂದೂರು ರೈಲು ಯಾತ್ರಿ ಸಂಘ ಅಧ್ಯಕ್ಷ, ಭಾರತೀಯ ರೈಲ್ವೆ ಬೋರ್ಡ್ ಸಲಹಾ ಸಮಿತಿಯ ಮಾಜಿ ಸದಸ್ಯ ವೆಂಕಟೇಶ್ ಕಿಣಿಯವರು ಮಡಗಾಂವ್-ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಮಯ ಬದಲಾವಣೆ ಒತ್ತಾಯಿಸಿ ಭಾರತೀಯ ರೈಲ್ವೆ ಬೋರ್ಡ್‌ಗೆ ಮನವಿಯನ್ನು ಸಲ್ಲಿಸಿದ್ದರು. ಮಡಗಾಂವ್‌ನಿಂದ ಬೆಳಗ್ಗೆ 5 ಗಂಟೆಗೆ ಹೊರಟು 12.15 ಗಂಟೆಗೆ ಮಂಗಳೂರು ತಲುಪುತ್ತಿತ್ತು. ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಮಂಗಳೂರು ಮತ್ತು ಉಡುಪಿಗೆ ಹೋಗುವವರಿಗೆ ಅನನುಕೂಲವಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದರು.
ಅವರ ಮನವಿಯನ್ನು ಕೊಂಕಣ ರೈಲ್ವೆ ಅವರು ಪಾಲಕ್ಕಾಡ್ ವಿಭಾಗದ ಪರಿಶೀಲನೆಗೆ ಕಳುಹಿಸಿದ್ದರು. ಪಾಲಕ್ಕಾಡ್ ವಿಭಾಗ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಿಲ್ಲ. ನಂತರ ಉಡುಪಿಯ ಸಮಾಜ ಸೇವಕ ಹನುಮಂತ ಕಾಮತ್ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಡ ಹೇರಿದ್ದರು. ನಂತರ ನಡೆದ ಸಭೆಯಲ್ಲಿ ಪ್ರಸ್ತಾವನೆಗೆ ದಕ್ಷಿಣ ರೈಲ್ವೆ ಒಪ್ಪಿಗೆ ಸೂಚಿಸಿದ್ದರು ಅನುಮತಿ ಸಿಕ್ಕಿರಲಿಲ್ಲ.
ಭಾರತೀಯ ರೈಲ್ವೆ ಮಂಡಳಿ ಆದೇಶ
ನಂತರ ರೈಲ್ವೆ ಬೋರ್ಡ್ ಅಧಿಕಾರಿಗಳ ಜತೆ ನಡೆಸಿದ ನಿರಂತರ ಸಂಪರ್ಕದಿಂದ ಭಾರತೀಯ ರೈಲ್ವೆ ಬೋರ್ಡ್ ಇದೀಗ ಸಮಯ ಬದಲಾವಣೆಗೊಳಿಸಿ ಆದೇಶ ಹೊರಡಿಸಿದೆ. ಬೆಳಗ್ಗೆ 4 ಗಂಟೆಗೆ ಮಡಗಾಂವ್ ಬಿಟ್ಟು ಬೆಳಗ್ಗೆ 7.30 ಗಂಟೆಗೆ ಬೈಂದೂರು, 10.15 ಗಂಟೆಗೆ ಸುರತ್ಕಲ್ ತಲುಪಲಿದೆ. ಸಮಯ ಬದಲಾವಣೆಯಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಭಾರಿ ಅನುಕೂಲ ಆಗಿದೆ ಎಂದು ಹನುಮಂತ ನಾಯಕ್ ತಿಳಿಸಿದ್ದಾರೆ.