ನವರಾತ್ರಿ ಹಬ್ಬದಂದು ದೇವಿಯರ ಪೂಜೆಯೇ ವಿಶೇಷ.. ಇಲ್ಲಿದೆ ನವ ದೇವಿಯರ ಸಂಪೂರ್ಣ ಮಾಹಿತಿ

Share with

ವರಾತ್ರಿ.. ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ಬಹಳ ಅದ್ಧೂರಿಯಿಂದ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ಹಾಗೆನೇ ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಗೋಕರ್ಣಾಥೇಶ್ವರ ದೇವಾಲಯದಲ್ಲಿ ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. ಮಂಗಳೂರಿನ ದಸರಾ ಎಂದೆ ವಿಖ್ಯಾತಿಯನ್ನು ಪಡೆದಿದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ಶೈಲಪುತ್ರಿ, ಬ್ರಹ್ಮಾಚಾರಿಣಿ, ಚಂದ್ರಘಂಟಾ, ಕೂಷ್ಮಂಡಾ, ಸ್ಕಂದಮಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಹೀಗೆ ನವ ವಿಧದಲ್ಲಿ ಪೂಜಿಸಲಾಗುತ್ತದೆ.

ಶೈಲಪುತ್ರಿ :‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

ಬ್ರಹ್ಮಚಾರಿಣಿ :‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

ಕೂಷ್ಮಾಂಡಾ : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

ಸ್ಕಂದಮಾತೆ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ. ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.

ಕಾಳರಾತ್ರಿ : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ಕಾಲ. ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ ಕಾಳರಾತ್ರಿ ಎನ್ನುತ್ತಾರೆ.

ಮಹಾಗೌರಿ : ತಪಸ್ಯೇನೆ ಮಹಾನ್ ಗೌರಃ, ಅಂದರೆ ತೇಜಸ್ಸನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ. ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ಗೌರ ಅಥವಾ ತೇಜಸ್ಸು ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ಮಹಾಗೌರಿ.

ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ಮೋಕ್ಷ ಅಥವಾ ಸಿದ್ಧಿ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.

ಈ ನವರಾತ್ರಿಯ ಏಳು ದಿನದಂದು ವ್ರತಾಚರಣೆಯನ್ನು ಮಾಡುವುದರಿಂದ ಸಕಲ ಐಶ್ವರ್ಯ, ಆರೋಗ್ಯ ಪ್ರಾಪ್ತಿಯಾಗುತ್ತದೆ. ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.


Share with

Leave a Reply

Your email address will not be published. Required fields are marked *