ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರಿನ ನಂತೂರು–ಪಡೀಲ್ ನಡುವಿನ ನಿಡ್ಡೇಲ್ ಕ್ರಾಸ್ ಬಳಿ ಶನಿವಾರ ನಸುಕಿನ ವೇಳೆ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಸಹಸವಾರ ಮೃತ ಪಟ್ಟ ಘಟನೆ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಫರಂಗಿಪೇಟೆ ನಿವಾಸಿ ಕೀರ್ತಿಕ್ (21) ಎಂದು ಗುರುತಿಸಲಾಗಿದೆ.
ಶನಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಸುಶೀತ್ ಎಂಬವವರು ಬೆಳಗಿನ ಜಾವ ಬೈಕ್ ನಲ್ಲಿ ಕೀರ್ತಿಕ್ ಅವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ನಂತೂರು ಕಡೆಯಿಂದ ಪಡೀಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಡ್ಡೇಲ್ ಕ್ರಾಸ್ ಬಳಿ ತಲುಪುತ್ತಿದ್ದಂತೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಸಹ ಸವಾರನಾಗಿದ್ದ ಕೀರ್ತಿಕ್ ತೀವ್ರ ಗಾಯಗೊಂಡಿದ್ದಾರೆ. ಸುಶೀತ್ ಅವರು ತನ್ನ ಸ್ನೇಹಿತ ನಿತೇಶ್ ಕುಮಾರ್ ಗೆ ವಿಷಯ ತಿಳಿಸಿದ್ದು, ನಿತೇಶ್ ಅವರು ಬಂದು ಸ್ಥಳೀಯ ಜನರ ಸಹಕಾರದೊಂದಿಗೆ ಕೀರ್ತಿಕ್ ನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಂಗಳೂರಿನ ಟ್ರಾಫಿಕ್ ಪೂರ್ವ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.