ಮಂಗಳೂರು: ಅಕ್ಟೋಬರ್ 29 ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಳಿಗಾಲದ ಋತುವಿನ ವೇಳಾಪಟ್ಟಿಯು ಆರಂಭವಾಗುತ್ತಿದ್ದು ಈ ಅವಧಿಯಲ್ಲಿ ವಿಮಾನಗಳ ಹಾರಾಟ ಹೆಚ್ಚಳವಾಗಲಿದೆ.
ಅ.29ರಿಂದ ನ.15ರ ಅವಧಿಯಲ್ಲಿ ವಿಮಾನಗಳ ಹಾರಾಟದಲ್ಲಿ ಶೇ. 26ರಷ್ಟು ವಿಮಾನಗಳ ಹಾರಾಟ ಹೆಚ್ಚಾಗಲಿದೆ. ಈ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು ಚಳಿಗಾಲದ ವೇಳಾಪಟ್ಟಿಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದ್ದು, ಪ್ರಸ್ತುತ 136 ವಿಮಾನಗಳು ಹಾರಾಟ ನಡೆಸುತ್ತಿದ್ದು ಈ ಸಂಖ್ಯೆ 172ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ.
ಸ್ಪೈಸ್ ಜೆಟ್ ವಿಮಾನವು ಬೆಂಗಳೂರಿಗೆ ಮಂಗಳವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ನಿತ್ಯ ಎರಡು ವಿಮಾನಗಳನ್ನು ನ. 6ರಿಂದ ಪ್ರಾರಂಭಿಸಲಿದೆ. ಮಂಗಳವಾರ ಒಂದು ವಿಮಾನ ಹಾರಾಟ ಮಾಡಲಿದೆ. ನ.15ರಿಂದ ಬೆಂಗಳೂರಿಗೆ ನಿತ್ಯ ಎರಡು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಚರಿಸಲಿದ್ದು, ಈ ಪೈಕಿ ಒಂದು ವಿಮಾನ ಕಣ್ಣೂರು/ತಿರುವನಂತಪುರಕ್ಕೆ ಸಂಪರ್ಕ ಕಲ್ಪಿಸಲಿದೆ. ಇಂಡಿಗೊ ಸಂಸ್ಥೆಯೂ ನ. 3ರಿಂದ ಮುಂಬಯಿಗೆ ನಾಲ್ಕನೇ ದೈನಂದಿನ ವಿಮಾನ ಯಾನವನ್ನು ಪ್ರಾರಂಭಿಸಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು 5 ಇಂಡಿಗೋ ವಿಮಾನಗಳು ಹಾರಾಟ ನಡೆಸಲಿವೆ. ಚೆನ್ನೈಗೆ ದೈನಂದಿನ ವಿಮಾನದ ಜತೆಗೆ ವಾರಕ್ಕೆ ನಾಲ್ಕು ಹೆಚ್ಚುವರಿ ವಿಮಾನಗಳನ್ನು ಕಲ್ಪಿಸಲಾಗುತ್ತಿದೆ. ಮುಂದಿನ ವರ್ಷದ ಮಾರ್ಚ್ ಒಳಗಾಗಿ ಇಂಡಿಗೋ ವಿಮಾನವು ಮಂಗಳೂರಿನಿಂದ ಪಾಟ್ನಾ, ರಾಂಚಿ, ಕೋಲ್ಕತಾ ನಡುವೆ ವಿಮಾನಯಾನ ಆರಂಭಿಸಲಿದೆ.
ಅಂತಾಷ್ಟ್ರೀಯ ಹಾಗೂ ದೇಶಿಯ ಹಂತದಲ್ಲಿ ಮಂಗಳೂರು ವಿಮಾನ ನಿಲ್ದಾಣವು ವಾರಕ್ಕೆ 136 ವಿಮಾನಗಳನ್ನು ನಿರ್ವಹಿಸುತ್ತಿದೆ. ಇದು ನ. 15ರಿಂದ 172 ವಿಮಾನಗಳಿಗೆ ಏರಿಕೆಯಾಗಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.