ಕೊಣಾಜೆ: ಹಂಚು ತೆಗೆದು ಮನೆಯೊಳಗೆ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಎಂಬಲ್ಲಿ ಬುಧವಾರ ರಾತ್ರಿ ವೇಳೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಅ.26ರಂದು ಬಂಧಿಸಿದ್ದಾರೆ.
ಹರೇಕಳ ನಿವಾಸಿ ನೌಫಾಲ್ (32) ಬಂಧಿತ ಆರೋಪಿಯಾಗಿದ್ದು, ನೆರೆಮನೆಯ ಮಹಿಳೆ ತನ್ನ ಮಕ್ಕಳಿಬ್ಬರ ಜೊತೆಗೆ ಮಲಗಿರುವ ಸಂದರ್ಭ ಹಂಚು ತೆಗೆದು ಒಳನುಗ್ಗಿದ ಆರೋಪಿ ನೌಫಾಲ್ ಮಹಿಳೆ ಮೈ ಸ್ಪರ್ಶಿಸಿದ್ದಾನೆ. ತಕ್ಷಣ ಎಚ್ಚೆತ್ತ ಮಹಿಳೆ ಬೊಬ್ಬೆ ಹಾಕಿದ್ದು, ಆರೋಪಿ ಓಡಿ ಪರಾರಿಯಾಗಿದ್ದಾನೆ.
ಸ್ಥಳೀಯರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಮಹಿಳೆಯ ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿರುವ ಮಾಹಿತಿಯಂತೆ ಮಹಿಳೆಯ ಮನೆಗೆ ನುಗ್ಗಿದ್ದು, ಈತ ಈ ಹಿಂದೆಯೂ ಸ್ಥಳೀಯರ ಬಚ್ಚಲುಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ದೂರುಗಳಿವೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.