ಮಂಗಳೂರು: ಮಹಿಳೆಯೋರ್ವರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಕಟೀಲು ಸಮೀಪದ ಕೊಂಡೆಲಾದಲ್ಲಿ ಸಂಭವಿಸಿದೆ. ರತ್ನಾ ಶೆಟ್ಟಿ (60) ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ.
ಕಟೀಲು ಸಮೀಪದ ಕೊಂಡೇಲಾ ದುರ್ಗಾ ನಗರ ಎಂಬಲ್ಲಿ ರತ್ನಾ ಶೆಟ್ಟಿ ವಾಸವಾಗಿದ್ದ ಮನೆಯ ಕೋಣೆಯೊಳಗೆ ಅಸಹಜವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆ ಕೃತ್ಯದ ಹಿಂದೆ ಆಕೆಯ ಪುತ್ರ ರವಿರಾಜ್ ಶೆಟ್ಟಿಯ ಕೈವಾಡ ಇರಬಹುದೇ ಎಂಬ ಸಂಶಯದ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ರವಿರಾಜ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಮಹಿಳೆ ರತ್ನಾ ಕಟೀಲು ದುರ್ಗಾ ನಗರದಲ್ಲಿ ಪುತ್ರ ರವಿರಾಜ್ ಜತೆ ವಾಸ್ತವ್ಯವಿದ್ದರು. ಗಿಡಿಗೆರೆ ಚರ್ಚ್ ಬಳಿಯ ಬಾಲಕೃಷ್ಣ ಎಂಬವರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಹೋಗಿರಲಿಲ್ಲ. ಈ ನಡುವೆ ಪುತ್ರ ರವಿರಾಜ್ ಶೆಟ್ಟಿ ತಾಯಿ ಜತೆ ವಾಸ್ತವ್ಯವಿದ್ದ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾನೆ. ಭಾನುವಾರ ಬೆಳಗ್ಗೆ ಮನೆಯ ಪರಿಸರದಲ್ಲಿ ವಾಸನೆ ಬರುತ್ತಿರುವುದನ್ನು ಕಂಡು ಅನುಮಾನದಿಂದ ಮನೆಯವರು ಮಹಿಳೆ ವಾಸವಿದ್ದ ಕೋಣೆಯ ಕಿಟಕಿಯ ಮೂಲಕ ಇಣುಕಿದಾಗ ಮಹಿಳೆಯ ಮುಖ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಹಾಗೂ ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಕೂಡಲೇ ಸ್ಥಳೀಯರು ಬಜಪೆ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ.
ಈ ನಡುವೆ ತಾಯಿಯ ಶವ ಪತ್ತೆಯಾದ ಮಾಹಿತಿ ಸಿಕ್ಕಿದ ಕೂಡಲೇ ಪುತ್ರ ರವಿರಾಜ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಎಸಿಪಿ ಮನೋಜ್ ಕುಮಾರ್, ಶ್ವಾನದಳ, ಬೆರಳಚ್ಚು ತಜ್ಞರು, ಬಜಪೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.