ಉಪ್ಪಳ: ವಿದ್ಯುತ್ ಕಂಬವೊಂದು ನಡು ರಸ್ತೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸಬಹುದಾಗಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಉಪ್ಪಳ ವಿದ್ಯುತ್ ಇಲಾಖೆ ವ್ಯಾಪ್ತಿಗೊಳಪಡುವ ಹೆದ್ದಾರಿಯಿಂದ ಕೆಲವೇ ಮೀಟರ್ ದೂರದ ನಯಬಜಾರ್‌ನ ಅಂಬಾರು ರಸ್ತೆಯಲ್ಲಿ ಈ ವಿದ್ಯುತ್ ಕಂಬ ಆತಂಕಕ್ಕೆ ಕಾರಣವಾಗುತ್ತಿದೆ.
ಈ ಹಿಂದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಲವು ವರ್ಷಗಳ ಹಿಂದೆ ರಸ್ತೆ ಅಗಲಗೊಳಿಸಿದಾಗ ಕಂಬವನ್ನು ತೆರವುಗೊಳಿಸದ ಕಾರಣ ಇದೀಗ ರಸ್ತೆಯ ಮಧ್ಯ ಭಾಗಕ್ಕೆ ತಲುಪಿದೆ. ಹಲವು ಭಾರಿ ತೆರವುಗೊಳಿಸಲು ತಿಳಿಸಿದರೂ ಕ್ರಮಕ್ಕೆ ಮುಂದಾಗಲಿಲ್ಲವೆಂದು ಸ್ಥಳೀಯರು ತಿಳೀಸಿದ್ದಾರೆ. ಈ ರಸ್ತೆಯಿಂದ ಅಂಬಾರು, ಚೆರುಗೋಳಿ, ಸೋಂಕಾಲು, ಪ್ರತಾಪನಗರಕ್ಕೆ ಸಂಗಮಿಸುತಿದ್ದು, ನೂರಾರು ವಾಹನಗಳು ಸಂಚಾರ ನಡೆಸುತ್ತಿದೆ.
ಅಲ್ಲದೆ ಈ ಪರಿಸರದಲ್ಲಿ ಅಗ್ನಿ ಶಾಮಕ ಕೇಂದ್ರ ಕಾರ್ಯಚರಿಸುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವುದಾಗಿ ದೂರಲಾಗಿದೆ. ಈ ಕಂಬದಲ್ಲಿ ಪರಿಸರದ ವ್ಯಾಪಾರ ಸಂಸ್ಥೆಗಳು ಮನೆಗಳ ಸಹಿತ ಭಾರೀ ಪ್ರಮಾಣದಲ್ಲಿ ಸಂಪರ್ಕವಿದೆ. ಅಪಘಾತಕ್ಕೀಡಾಗಿ ಕಂಬ ಮುರಿದು ಬಿದ್ದಲ್ಲಿ ದುರಂತ ಸಂಭವಿಸಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಕಂಬವನ್ನು ಮಧ್ಯಭಾಗದಿಂದ ತೆರವುಗೊಳಿಸಿ ಬದಿಗೆ ಸರಿಸಿ ಸ್ಥಾಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.