ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮೊಟಕುಗೊಳಿಸಿದ ರಾತ್ರಿ ಐಪಿ, ತುರ್ತುನಿಗಾ ವಿಭಾಗವನ್ನು ಹಾಗೂ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಆರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವೈದ್ಯರ ಕೊರತೆಯಿಂದ ಕಳೆದ ತಿಂಗಳು 30ರಿಂದ ರಾತ್ರಿ ಚಿಕಿತ್ಸೆಯನ್ನು ಮೊಟಕುಗೊಳಿಸಲಾಗಿದ್ದು, ಸಾರ್ವಜನಿಕರು ತೀರಾ ಸಂಕಷ್ಟಕ್ಕೀಡಾಗಿದ್ದಾರೆ. ಮಂಗಲ್ಪಾಡಿ, ಪೈವಳಿಕೆ, ಮಂಜೇಶ್ವರ ಮೊದಲಾದ ಪಂಚಾಯತ್ ವ್ಯಾಪ್ತಿಯಿಂದ ದಿನನಿತ್ಯ ನೂರಾರು ರೋಗಿಗಳು ತಲುಪುವ ಆಸ್ಪತ್ರೆ ಇದಾಗಿದೆ.
ರಾತ್ರಿ ಕಾಲದಲ್ಲಿ ಚಿಕಿತ್ಸೆ ಸಾರ್ವಜನಿಕರಿಗೆ ಬಹಳ ಪ್ರಯೋಜನವಾಗಿದೆ. ರಾತ್ರಿ ಚಿಕಿತ್ಸೆಯನ್ನು ಮೊಟಕುಗೊಳಿಸಿದ ಬಗ್ಗೆ ಹಾಗೂ ಇತರ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಇತ್ತೀಚೆಗೆ ಮಂಗಲ್ಪಾಡಿ ಜನಕೀಯ ವೇದಿ ಹಾಗೂ ಮುಸ್ಲಿಂಲೀಗ್ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಈ ತಿಂಗಳ 9ರಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ಆಸ್ಪತ್ರೆಗೆ ಭೇತಿ ನೀಡಿ ವಿವಿಧ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. 10 ದಿನದೊಳಗೆ ರಾತ್ರಿ ಹೊತ್ತು ಚಿಕಿತ್ಸೆಯನ್ನು ಪ್ರಾರಂಭಿಸುವುದಾಗಿ ಸಚಿವೆ ಜನಕೀಯ ವೇದಿಯ ಪದಾಧಿಕಾರಿಗಳಿಗೆ ತಿಳಿಸಿದೆನ್ನಲಾಗಿದೆ.
ಆದರೆ 10 ದಿನ ಕಳೆದರೂ ಕ್ರಮ ಉಂಟಾಗದಿರುವುದು ಮತ್ತೆ ಪ್ರತಿಭಟನೆಗೆ ಕಾರಣವಾಗುವ ಸಾಧ್ಯತೆ ಉಂಟಾಗಬಹುದೆನ್ನಲಾಗಿದೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಇನ್ನಾದರೂ ರಾತ್ರಿ ಚಿಕಿತ್ಸೆ ಆರಂಭಿಸಿ ಬಡವರಿಗೆ ನೆರವಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.