ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ಸಮೀಪದ ಉಪ್ಪುಂದ ಶಾಲೆಬಾಗಿಲು ಎಂಬಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ನಿರ್ವಾಹಕರಿಬ್ಬರು ಗಂಭೀರ ಗಾಯಗೊಂಡ ಘಟನೆ ನ.21ರಂದು ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡ ಚಾಲಕನನ್ನು ನಾಯ್ಕನಕಟ್ಟೆ ನಿವಾಸಿ ವಿಶ್ವನಾಥ್ (32) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಬಗ್ಗೆ ಮಾಹಿತಿ ಲಭಿಸಿಲ್ಲ. ಬೈಂದೂರಿನಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ 407 ಲಾರಿಯು ಶಾಲೆಬಾಗಿಲು ಎಂಬಲ್ಲಿ ಬರುತ್ತಿದ್ದಂತೆ ತಿರುವು ಇರುವ ಸ್ಥಳಕ್ಕೆ ಸಮೀಪದಲ್ಲಿ ಹೆದ್ದಾರಿ ನಡುವೆ ಇರುವ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಎದುರಿನ ರಸ್ತೆಗೆ ಬಿದ್ದಿದೆ.
ಈ ಸಂದರ್ಭ ಮಂಗಳೂರಿನಿಂದ ಬೆಳಗಾವಿಗೆ ಸರಕು ಸಾಗಿಸುತ್ತಿದ್ದ ಇನ್ನೊಂದು ಲಾರಿ ಬೈಂದೂರು ಕಡೆಗೆ ಚಲಿಸುತ್ತಿದ್ದು ಅದಕ್ಕೂ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡ 407 ಲಾರಿ ಚಾಲಕ ವಿಶ್ವನಾಥ ಹಾಗೂ ನಿರ್ವಾಹಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.