ಕುತ್ಲೂರಿನ ಮನೆಗೆ ತಡರಾತ್ರಿ ನಕ್ಸಲರ ಭೇಟಿ ವದಂತಿ: ಪೊಲೀಸ್‌ ಆಯುಕ್ತರಾದ ಅನುಪಮ್‌ ಅಗರ್‌ವಾಲ್‌ ಸ್ಪಷ್ಟನೆ

Share with

ಬೆಳ್ತಂಗಡಿ: ಬೆಳ್ತಂಗಡಿಯ ಕುತ್ಲೂರಿನಲ್ಲಿ ಮನೆಯೊಂದಕ್ಕೆ ನ.21ರಂದು ರಾತ್ರಿ ನಕ್ಸಲರು ಭೇಟಿ ನೀಡಿದ್ದರು ಎಂಬ ವದಂತಿಯೊಂದು ಸೃಷ್ಟಿಯಾಗಿದ್ದು, ಇದರ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಹಾಗೂ ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಅನುಪಮ್‌ ಅಗರ್‌ವಾಲ್‌ ಅವರು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣವೊಂದರ ತನಿಖೆಗಾಗಿ ಮೂಡುಬಿದಿರೆ ಪೊಲೀಸರು ಅಲ್ಲಿಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಅನುಪಮ್‌ ಅಗರ್‌ವಾಲ್‌.

ಕುತ್ಲೂರು ಗ್ರಾಮದ ನಿವಾಸಿ ಜೋಸಿ ಆಂಟೋನಿ ತನ್ನ ಮನೆಗೆ ರಾತ್ರಿಯ ವೇಳೆ ಮಹಿಳೆ ಸೇರಿದಂತೆ ಅಪರಿಚಿತರ ತಂಡ ಬಂದು ಬಾಗಿಲು ಬಡಿದಿದೆ, ಆದರೆ ನಾನು ಬಾಗಿಲು ತೆರೆಯಲಿಲ್ಲ ಎಂದು ನ.21ರ ರಾತ್ರಿ ಪೊಲೀಸರ ತುರ್ತು ಸಹಾಯವಾಣಿ 112ಕ್ಕೆ ಕರೆಮಾಡಿ ಹೇಳಿದ್ದರು. ಅವರು ಪೊಲೀಸರು ಎಂದು ಹೇಳಿದರೂ ಸಮವಸ್ತ್ರದಲ್ಲಿರದ ಕಾರಣ ಅನುಮಾನವಿದೆ, ನಕ್ಸಲರಾಗಿರಬಹುದು ಎಂಬ ಹೇಳಿಕೆಯನ್ನು ನೀಡಿದ್ದು ಇದು ಹಲವಾರು ಗೊಂದಲಗಳಿಗೆ ಕಾರಣವಾಗಿತ್ತು. ಮಾಹಿತಿ ತಿಳಿದ ತಕ್ಷಣ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ, ವೇಣೂರು ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ನಿಜ ವಿಚಾರ ಏನು?
ಇಲ್ಲಿನ ಜೋಸಿ ಆಂಟೋನಿ ತನ್ನ ಒಂದು ಜಾಗವನ್ನು ಬೆಂಗಳೂರಿನ ಸುಹನಾ ಎಂಬವರಿಗೆ 45 ಲಕ್ಷ ರೂಪಾಯಿಗೆ ಅಗ್ರಿಮೆಂಟ್‌ ಮಾಡಿದ್ದು 24 ಲಕ್ಷ ರೂಪಾಯಿ ಚೆಕ್‌ ಮೂಲಕವಾಗಿ ಪಡೆದಿದ್ದರು. ಅಂತೆಯೇ ಬೆಂಗಳೂರಿನ ಶರತ್‌ ಅವರಿಗೆ 48 ಲಕ್ಷ ರೂಪಾಯಿಗೆ ಅಗ್ರಿಮೆಂಟ್‌ ಮಾಡಿದ್ದು 19 ಲಕ್ಷ ರೂಪಾಯಿ ಚೆಕ್‌ ಮೂಲಕ ಪಡೆದು ವಂಚಿಸಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ನ.17ರಂದು ಮೂಡುಬಿದಿರೆ ಪೊಲೀಸ್‌ ಠಾಣೆಗೆ ಸಂತ್ರಸ್ತರಿಂದ ದೂರು ಬಂದಿದ್ದು, ವಿಚಾರಣೆಗಾಗಿ ಪೊಲೀಸರು ಫೋನ್‌ ಮೂಲಕ ಸಂಪರ್ಕಿಸಿದಾಗ ಆತ ಸಂರ್ಪಕಕ್ಕೆ ಸಿಕ್ಕಿರಲಿಲ್ಲ. ಅಂದೇ ಮಧ್ಯಾಹ್ನ ಠಾಣೆಯ ಸಿಬ್ಬಂದಿ ದೂರುದಾರರೊಂದಿಗೆ ಜೋಸಿಯ ಮನೆಗೆ ನೋಟಿಸ್‌ ನೀಡಲು ತೆರಳಿದ್ದು ಆಗಲೂ ಆತ ಮನೆಯಲ್ಲಿ ಇರಲಿಲ್ಲ. ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ. ಸ್ಥಳೀಯರಲ್ಲಿ ವಿಚಾರಿಸಿದಾಗ ಆತ ಹಗಲು ವೇಳೆ ಮನೆಯಲ್ಲಿ ಇರುವುದಿಲ್ಲ. ರಾತ್ರಿ 9ರ ಬಳಿಕ ಮನೆಗೆ ಬರುತ್ತಾನೆ ಎಂದು ತಿಳಿಸಿದ್ದರು. ಅದರಂತೆ ನ.21ರಂದು ರಾತ್ರಿ 9 ಗಂಟೆಯ ಅನಂತರ ಪೊಲೀಸರು ಜೋಸಿಯ ಮನೆಗೆ ಹೋಗಿದ್ದರು. ಬಾಗಿಲು ತೆರೆಯದ ಕಾರಣ ನೋಟಿಸ್‌ ಜಾರಿ ಮಾಡದೆ ವಾಪಸಾಗಿದ್ದಾರೆ. ಇದನ್ನು ಜೋಸಿ ತಪ್ಪಾಗಿ ಗ್ರಹಿಸಿ ನಕ್ಸಲರು ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಉಭಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *