ಧರ್ಮಸ್ಥಳ: ಮಲ್ಲರ್ಮಾಡಿ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ, ಕಾರ್ಮಿಕನೋರ್ವ ವಿದ್ಯುತ್ ಶಾಕ್‌ಗೆ ಒಳಗಾಗಿ ಸಾವನ್ನಪ್ಪಿದ ದಾರುಣ ಘಟನೆ ನ.24ರಂದು ಬೆಳಿಗ್ಗೆ ಸಂಭವಿಸಿದೆ.
ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (49ವ) ಈ ದುರ್ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ನ.24ರಂದು ಬೆಳಿಗ್ಗೆ ಸ್ಥಳೀಯ ಬೊಮ್ಮಣ್ಣ ಗೌಡ ಎಂಬವರ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದು, ತೋಟದಲ್ಲಿ ಸೊಪ್ಪು ಕಡಿಯಲು ಅಲ್ಯೂಮಿನಿಯಂ ಏಣಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೋಟದ ನಡುವಿನಲ್ಲಿ ಹಾದುಹೋಗಿದ್ದ ವಿದ್ಯುತ್‌ಲೈನ್‌ಗೆ ತಾಗಿ ವಿದ್ಯುತ್‌ಶಾಕ್ ತಗಲಿ, ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದರೆನ್ನಲಾಗಿದೆ.
ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ, ಯಾವುದೇ ಪ್ರಯೋಜನವಾಗದೆ ಅವರು ದಾರಿ ಮಧ್ಯೆ ಮೃತಪಟ್ಟರೆಂದು ವರದಿಯಾಗಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.