ಉಳ್ಳಾಲ: ನಕಲಿ ಚಿನ್ನ ಧರಿಸಿಕೊಂಡು ಅಂಗಡಿ ಮಾಲೀಕರಿಗೆ ವಂಚನೆ; ಆರೋಪಿಯ ಗುರುತು ಪತ್ತೆ!

Share with

ಉಳ್ಳಾಲ: ತೊಕ್ಕೊಟ್ಟು ಹಾಗೂ ಕುತ್ತಾರಿನಲ್ಲಿ ಅಂಗಡಿಗೆ ವಂಚಿಸಿದ ಆರೋಪಿಯ ಗುರುತು ಕಂಡು ಹಿಡಿದಿರುವ ಅಂಗಡಿಯ ಮಾಲೀಕರು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಸಬಾ ಬೆಂಗ್ರೆ ನಿವಾಸಿ, ಹಲವು ವಂಚನೆ ಪ್ರಕರಣಗಳ ಆರೋಪಿಯಾದ ಗೂಡ್ಸ್ ಮುನೀರ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ‌.

ಕಸಬಾ ಬೆಂಗ್ರೆ ನಿವಾಸಿ , ಆರೋಪಿಯಾದ ಗೂಡ್ಸ್ ಮುನೀರ.

ಕಳೆದ ಅಕ್ಟೋಬರ್ ತಿಂಗಳಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಅಯ್ಯಂಗಾರ್ ಬೇಕರಿ ಮತ್ತು ಸಮೀಪದ ಪೂರ್ಣಿಮ ಎಂಬವರ ದಿನಸಿ ಅಂಗಡಿಗೆ ಮೈಯಿಡೀ ಚಿನ್ನದ ಒಡವೆ ಧರಿಸಿದ್ದ ವ್ಯಕ್ತಿಯೋರ್ವ ಹೆಲ್ಮೆಟ್ ತೆಗೆಯದೆ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿ ಸಾವಿರಾರು ರೂಪಾಯಿ ಮೌಲ್ಯದ ಸಿಹಿ-ತಿಂಡಿ, ದಿನಸಿ ಖರೀದಿಸಿ ಗೂಗಲ್ ಪೇ ಮಾಡಲು ಫೋನ್ ಸ್ವಿಚ್ ಆಫ್ ಆಗಿದೆ.

ಈಗಲೇ ಹಣ ತಂದು ಕೊಡುವೆ ಎಂದು ಹೇಳಿ ಅಂಗಡಿಗಳ ಮಾಲೀಕರನ್ನು ವಂಚಿಸಿದ್ದನು. ಪ್ರಕರಣ ನಡೆದ ಕೆಲವು ದಿನಗಳ ಬಳಿಕ ಮತ್ತೆ ನ.13 ರಂದು ಕುತ್ತಾರು ಪಂಡಿತ್ ಹೌಸ್ ನಲ್ಲಿರುವ “ಸುಧಿ ಕಲೆಕ್ಷನ್” ಎಂಬ ಮೊಬೈಲ್ ಅಂಗಡಿಗೆ ತೆರಳಿ ಮಾಲಕ ದೀಪಕ್ ಅವರಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ, ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿ ನನ್ನ ಮನೆ ಸಮೀಪದಲ್ಲಿಯೇ ಇದ್ದು ನಾಳೆ ಹಣ ನೀಡುವುದಾಗಿ ತನ್ನ ಮೊಬೈಲ್ ನಂಬರ್ ನೀಡಿ ತೆರಳಿದ್ದನು.

ದೀಪಕ್ ಅವರು ವಂಚಕ ನೀಡಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು ತಾನು ಮೋಸ ಹೋಗಿರುವುದು ಗೊತ್ತಾಗಿ ಮೊಬೈಲ್ ನಂಬರ್ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದಾಗ ಅದು ವಂಚಕ ಗೂಡ್ಸ್ ಮುನೀರನಿಗೆ ಸೇರಿದ್ದೆಂಬುದು ತಿಳಿದುಬಂದಿದೆ. ಗೂಡ್ಸ್ ಮುನೀರನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ವಂಚನೆ ಹಾಗೂ ಕಳವು ಪ್ರಕರಣಗಳು ದಾಖಲಾಗಿವೆ.


Share with

Leave a Reply

Your email address will not be published. Required fields are marked *