ಬಂಟ್ವಾಳ: ಕಾರು ಹಾಗೂ ಬೋರ್ವೆಲ್ ಲಾರಿ ನಡುವೆ ಡಿಕ್ಕಿ ಸಂಭವಿಸಿ, ಬೆಂಗಳೂರು ಕಂಬಳ ನೋಡಿ ಹಿಂದಿರುಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನ ಕುಣಿಗಲ್ ಸಮೀಪ ನಡೆದಿದೆ.
ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಭಟ್ರತೋಟ ನಿವಾಸಿ ಫಿಲಿಪ್ ಮೇರಿ ಲೋಬೊ (32) ಹಾಗೂ ಮಂಗಳೂರು ಬಜಪೆ ಮೂಲ ಮೂಡುಪೆರಾರ ನಿವಾಸಿ ಕಿಶನ್ ಶೆಟ್ಟಿ (22) ಸಾವನ್ನಪ್ಪಿದವರು.
ರಾಜ್ಯ ಹೆದ್ದಾರಿ 33ರಲ್ಲಿ ಘಟನೆ ನಡೆದಿದ್ದು, ಕೊತ್ತಗೆರೆ ಹೋಬಳಿ ಚಿಗಣಿಪಾಳ್ಯ ಗ್ರಾಮದ ಬಳಿ ನಡೆದ ಈ ಅಪಘಾತದಲ್ಲಿ ಅಮ್ಮುಂಜೆ ನಿವಾಸಿಗಳಾದ ನಿತೀಶ ಭಂಡಾರಿ, ಪ್ರೀತಿ ಲೋಬೊ, ಹರೀಶ್ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ : ಬಂಟ್ವಾಳದ ಅಮ್ಮುಂಜೆಯಿಂದ ಬೆಂಗಳೂರಿನ ಕಂಬಳ ವೀಕ್ಷಿಸಲೆಂದು ಇವರು ತೆರಳಿದ್ದು, ವಾಪಾಸು ಬರುವ ವೇಳೆ ಈ ಅವಘಡ ಸಂಭವಿಸಿದೆ.
ನ.25ರಂದು ತಡರಾತ್ರಿ ಬೆಂಗಳೂರಿನಿಂದ ಹೊರಟ ಇವರು, ನೋಡಿಕೊಂಡು ತಮ್ಮ ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
ದಾರಿ ತಪ್ಪಿ ಅವಘಡ..!
ನೆಲಮಂಗಲದಿಂದ ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಾಗಿದ್ದವರು ದಾರಿ ತಪ್ಪಿ ತುಮಕೂರು ಕಡೆಗೆ ಹೋಗಿದ್ದಾರೆ, ಬಳಿಕ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ನಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಇವರ ಕಾರು ಹಾಗೂ ಬೋರ್ ವೆಲ್ ಲಾರಿ ನಡುವೆ ಈ ಅವಘಡ ನಡೆದಿದೆ.
ಫಿಲೀಪ್ ಮೇರಿ ಲೋಬೊ ಮತ್ತು ಪ್ರೀತಿ ಲೋಬೋ ಕಳೆದ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದರು. ಮೃತ ಕಿಶನ್ ಶೆಟ್ಟಿಯವರು, ನಿತೀಶ್ ಭಂಡಾರಿಯ ಸಂಬಂಧಿಕರಾಗಿದ್ದು ಕಂಬಳ ವೀಕ್ಷಣೆಗೆ ಬಂಟ್ವಾಳದವರ ಜೊತೆ ಬೆಂಗಳೂರಿಗೆ ತೆರಳಿದ್ದರು. ಗಾಯಾಳುಗಳಿಗೆ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಣಿಗಲ್ ಪೊಲೀಸರು ತಿಳಿಸಿದ್ದಾರೆ. ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಈ ಕುರಿತು ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.