ವಿಟ್ಲ: ಕುಳ ಗ್ರಾಮದ ನೀರಪಳಿಕೆಯಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಹೆದರಿಸಿ ಚಿನ್ನ ಕದಿಯಲು ಯತ್ನಿಸಿದ ಘಟನೆ ನ.25ರಂದು ನಡೆದಿದೆ.
ನೀರಪಳಿಕೆ ಮಹಮ್ಮದ್ ಕುಂಞ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯವರು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದಾಗ ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ಮನೆಯಲ್ಲಿ ಇರುವ ಸಂದರ್ಭದಲ್ಲಿ ಮುಖ್ಯ ದ್ವಾರದ ಮೂಲಕ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿ ಒಳ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿ ಮಹಿಳೆಗೆ ಚಾಕು ತೋರಿಸಿ, ಕಿವಿಯಲ್ಲಿರುವ ಚಿನ್ನ ಕೊಡುವಂತೆ ಕೇಳಿದ್ದಾನೆ. ಹೆದರಿದ ಮಹಿಳೆಯು ಹಿಂದಿನ ಬಾಗಿಲಿನ ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಆತ ಹಿಂಬದಿಯ ತೋಟದ ದಾರಿಯಾಗಿ ಪರಾರಿಯಾಗಿದ್ದಾನೆ.
ನಂತರ 112ಕ್ಕೆ ಕರೆಮಾಡಿ ಮಾಹಿತಿ ನೀಡಿದಾಗ ತುರ್ತು ಕಾರ್ಯಪಡೆಯ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದರು. ಬಳಿಕ ವಿಟ್ಲ ಠಾಣೆಗೆ ಮಾಹಿತಿ ನೀಡಲಾಯಿತು. ವಿಟ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.